ವಾರದಲ್ಲಿ ಕರ್ತವ್ಯಕ್ಕೆ ಹಾಜರಾಗಿ..
ಯಾದಗಿರಿ: ಸುರಪುರದ ಬಾಲಕಿಯರ ಪ್ರೌಢಶಾಲೆಯಲ್ಲಿ ಜವಾನರಾಗಿರುವ ಮಹ್ಮದ್ ಇಸ್ಮಾಯಿಲ್ ಅವರು ಒಂದು ವರ್ಷದಿಂದ ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಾಗಿದ್ದು, ವಾರದೊಳಗೆ ಸೇವೆ ಹಾಜರಾಗುವಂತೆ ಡಿಡಿಪಿಐ ರಾಮಾಂಜನೇಯ ಸೂಚಿಸಿದ್ದಾರೆ. ಮಹ್ಮದ್ ಇಸ್ಮಾಯಿಲ್ ಅವರು 2012ರ ಮೇ 9ರಿಂದ ಇಲ್ಲಿಯವರೆಗೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಈ ಕುರಿತು ನೋಟಿಸ್ ಜಾರಿ ಮಾಡಿದರೂ ಕರ್ತವ್ಯಕ್ಕೆ ಬಂದಿಲ್ಲ. ಇದರಿಂದ ಶಾಲಾ ಆಡಳಿತಾತ್ಮಕ ಕಾರ್ಯಗಳಿಗೆ ತೊಂದರೆಯಾಗಿದೆ. ಆದ್ದರಿಂದ ಒಂದು ವಾರದೊಳಗೆ ಕರ್ತವ್ಯಕ್ಕೆ ಹಾಜರಾಗದಿದ್ದರೆ ಏಕಪಕ್ಷೀಯವಾಗಿ ಕ್ರಮ ಜರುಗಿಸಿ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ
ಯಾದಗಿರಿ: ತಾಲೂಕಿನಲ್ಲಿ ಬಿಸಿಎಂ ಇಲಾಖೆಯಿಂದ ನಿರ್ವಹಣೆಯಾಗುತ್ತಿರುವ ಮೆಟ್ರಿಕ್ ಪೂರ್ವ ವಸತಿ ನಿಲಯಗಳು, ಖಾಸಗಿ ಅನುದಾನಿತ ಹಾಸ್ಟೆಲ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 5ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಗ್ರಾಮಾಂತರ ಪ್ರದೇಶಗಳಿಂದ ಬರುವ ಹಾಗೂ ಆದಾಯ ಮಿತಿಯೊಳಗಿರಬೇಕು ಮತ್ತು ನಿಲಯದಿಂದ ವಿದ್ಯಾರ್ಥಿಗಳ ಸ್ವಂತ ಸ್ಥಳಕ್ಕೆ ಸುಮಾರು 5 ಕಿಮೀ ಮೇಲ್ಪಟ್ಟಿರಬೇಕು ಎಂದು ತಿಳಿಸಲಾಗಿದೆ. ಅರ್ಜಿಗಳನ್ನು ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಾರ್ಯಾಲಯ, ಬಾಲಾಜಿ ಮಂದಿರ ರಸ್ತೆ, ಯಾದಗಿರಿ ಅವರಿಂದ ಪಡೆದು ಭರ್ತಿ ಮಾಡಿ ಇದೇ ಕಾರ್ಯಾಲಯಕ್ಕೆ ಜೂ.10ರೊಳಗೆ ಸಲ್ಲಿಸಲು ಕೋರಲಾಗಿದೆ.
ಟಾಟಾ ಏಸ್, ಬೈಕ್ ಡಿಕ್ಕಿ: ಒಬ್ಬ ಸಾವು
ಯಾದಗಿರಿ: ಟಾಟಾ ಏಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಹೊರವಲಯದ ಸಾರಿಗೆ ಸಂಸ್ಥೆ ಕಾರ್ಯಾಗಾರದ ತಿರುವಿನಲ್ಲಿ ಭಾನುವಾರ ಸಂಭವಿಸಿದೆ.
ತಾಲೂಕಿನ ಬೆಳಗೇರಾ ಗ್ರಾಮದ ಯಮನಪ್ಪ (25) ಮೃತ ವ್ಯಕ್ತಿ. ಬೈಕ್ ಹಿಂಬದಿ ಸವಾರ ಗಿರಿಲಿಂಗಪ್ಪ ಎಂಬವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಟಾಟಾ ಏಸ್ನಲ್ಲಿದ್ದ 3 ವರ್ಷದ ಬಾಲಕನಿಗೂ ಸಣ್ಣಪುಟ್ಟ ಗಾಯವಾಗಿದೆ. ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.