ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕುಡಿವ ನೀರಿಗೂ ಕೃತಕ ಅಭಾವ

Rashmi Kasaragodu
Updated On : 21 May 2013, 12:04 pm

ಕನ್ನಡಪ್ರಭ ವಾರ್ತೆ, ಆಳಂದ, ಮೇ 20
ಜಿಲ್ಲೆಯ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾಗಿರುವ ತಾಲೂಕಿನ ಅಮರ್ಜಾ ಅಣೆಕಟ್ಟೆಗೆ ಮಳೆಯ ಕೊರತೆ ಹಾಗೂ ಇದ್ದ ನೀರನ್ನು ಹಳ್ಳಕ್ಕೆ ಹರಿಬಿಟ್ಟ ಪರಿಣಾಮ ಒಣಗಿ ನಿಂತ್ತಿದ್ದು, ಇದರಿಂದ ಕಾಲುವೆಯನ್ನೇ ನಂಬಿಕೊಂಡಿದ್ದ ರೈತರು ಗೋಳಾಡಿದರೆ, ಪಟ್ಟಣದ ನೀರಿನ ಮೂಲವಾಗಿದ್ದ ಜನತೆಗೂ ಪರಿತಪ್ಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆಳಂದ ಪಟ್ಟಣ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಪರೋಕ್ಷ ಹಾಗೂ ಅಪರೋಕ್ಷವಾಗಿ ನೀರಿನ ಆಶ್ರಯವಾಗಿದ್ದ ಈ ಅಣೆಕಟ್ಟೆ ಕಳೆದ ಮಳೆಗಾಲದಲ್ಲೇ ಅತಿ ಹೆಚ್ಚು ನೀರು ಸಂಗ್ರಹಗೊಂಡಿದ್ದರೆ ಇದೇ ಮೊದಲು ಬಾರಿಗೆ ಶೇ 90ರಷ್ಟು ಒಣಗಿನಿಂತಿರುವುದು ಮತ್ತೊಂದಡೆ ದುಃಖಿಸುವಂತ್ತಾಗಿದೆ.
ತಾಲೂಕು ಕೇಂದ್ರ ಆಳಂದ, ಜಿಡಗಾಕ್ಕೆ ಕುಡಿಯುವ ನೀರು ಪೂರೈಸುವ ಏಕೈಕ ಅಣೆಕಟ್ಟಗಿದೆ. ಅಲ್ಲದೆ, ಕಾಲುವೆ ಹಾಗೂ ಅಣೆಕಟ್ಟೆ ಒಳಭಾಗದಲ್ಲಿ ಪಂಪಸೆಟ್ ಅಳವಡಿಸಿ ನೂರಾರು ಎಕರೆ ನೀರಾವರಿ ಕೈಗೊಂಡ ರೈತರ ಬೆಳೆಯಲ್ಲೇ ನಷ್ಟವಾಗಿದೆ.
ರೈತರ ಆತಂಕ: ಕಾಲುವೆ ನೀರು ನಂಬಿ ನೂರಾರು ಎಕರೆ ಕಬ್ಬು ನಾಟಿಮಾಡಿರುವ ರೈತರಿಗೆ ಅಣೆಕಟ್ಟೆ ಬರಿದಾಗಿ ನಿಂತಿರುವುದು ಆತಂಕ ಮೂಡಿಸಿದೆ. ಈಗಾಗಲೇ ಸಮರ್ಪಕ ಮಳೆ ಕೊರತೆ ಮತ್ತು ಕಾಲುವೆಗೂ ನೀರು ದೊರೆಯದೆ ಕಬ್ಬು ಮತ್ತಿತರ ಬೆಳೆ ಬೆಳೆಯದೆ ರೈತರು ಕೈಕಟ್ಟಿ ಕುಳಿತಿದ್ದಾರೆ.
ಮೇಲಭಾಗದಲ್ಲೂ ಹಳ್ಳಕೊಳ್ಳಗಳಿಗೆ ನೀರಿಲ್ಲದೆ ಜನ ಜಾನುವಾರಿಗಳು ಪರಿತಪಿಸುವಂತಾಗಿದೆ.
ನೀರಿನ ಹಾಹಾಕಾರ: ಸುಮಾರು 40 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣದ ಜನ ಜಾನುವಾರುಗಳಿಗೆ ನೀರಿನ ತೊಂದರೆಯಾಗಿದೆ. ಮುಖ್ಯಗೇಟಿನ ಕೆಳಹಂತದಲ್ಲಿ ನೀರು ಬತ್ತಿಹೋಗಿದೆ. ಮುಂಬರುವ ದಿನಗಳಲ್ಲಿ ಕುಡಿಯುವ ನೀರು ಪೂರೈಕೆ ವ್ಯವಸ್ಥೆಗೆ ಧಕ್ಕೆಯಾಗದು ಎಂದು ಕೆಸರಲ್ಲಿ ಕಲ್ಲು ಹಾಕಿ ದಾಟಿದ ಅಧಿಕಾರಿಗಳು ಈಗ ಮೌನಮುರಿಯುತ್ತಿಲ್ಲ.
1972ರ ಬರಗಾಲದ ಪರಿಸ್ಥಿತಿಯಲ್ಲಿ ಕೇವಲ 5.50 ಕೋಟಿ ವೆಚ್ಚದಲ್ಲಿ ಮುಗಿಯಬೇಕಾಗಿದ್ದ ಅಣೆಕಟ್ಟಿಗೆ ಅಧಿಕಾರಿಗಳ ಭ್ರಷ್ಟಾಚಾರ ಹಾಗೂ ಜನಪತ್ರಿನಿಧಿಗಳ ಪಾಲುಗಾರಿಕೆಯಿಂದ ಇನ್ನೂರು ಕೋಟಿ ಹಣ ಸುರಿದರೂ  ಸಮರ್ಪಕವಾಗಿ ರೈತರ ಜಮೀನಿಗೆ ನೀರು ತಲುಪಿಲ್ಲ.  
ಕಳಪೆ ಕಾಮಗಾರಿಯೇ ಕಾರಣ: ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡು ಬಂದಿದ್ದರೆ ಇಷ್ಟೊತ್ತಿಗೆ ಸಾವಿರಾರು ಏಕರೆ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ರೈತರು ಬೆಳೆಯಲು ಅನುಕೂಲವಾಗುತ್ತಿತ್ತು. ಆದರೆ, ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾಣಲು ನವೀಕರಣ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಯಲು ಕಾರಣ ಎಂದು ರೈತರ ಆರೋಪವಾಗಿದೆ.
ಕಳಪೆ ಕಾಮಗಾರಿಗಳು, ರಾಜಕೀಯ, ರೈತರ ಇಚ್ಛಾಶಕ್ತಿ ಕೊರತೆಯಾಗಿರುವುದರಿಂದ ಆಳಂದ ಮತ್ತು ಅಫಜಲ್ಪುರ ತಾಲೂಕುಗಳು ಸೇರಿ 22 ಗ್ರಾಮಗಳಿಗೂ ನೀರಿನ ಸೌಕರ್ಯ ಕಲ್ಪಿಸಲು ಸಾಧ್ಯವಾಗಲಿಲ್ಲ.
ಇನ್ನಾದರೂ ಜನಪ್ರತಿನಿಧಿಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಿ ರೈತರ ಹೊಲಗಳಿಗೆ ಕಾಲುವೆಗಳ ಮೂಲಕ ನೀರು ಬಿಡುವ ಮೂಲಕ ರೈತಾಪಿ ಜನರಿಗೆ ಅನಕೂಲ ಮಾಡಿಕೊಡುವರೆ ಎಂದು ಸಾರ್ವಜನಿಕರು ಎದುರು ನೋಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement