ಬಾಲಕಿ ಮೇಲೆ ಅತ್ಯಾಚಾರ; ವಿವಿಧ ಸಂಘಟನೆ ಖಂಡನೆ
ಗುಲ್ಬರ್ಗ: ಶಹಾಬಾದ್‌ನಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಘಟನೆಯು ಅತ್ಯಂತ ಆಘಾತಕಾರಿಯಾಗಿದ್ದು, ಈ ಘಟನೆಯನ್ನು ಎಐಎಂಎಸ್‌ಎಸ್, ಎಐಡಿವೈಒ, ಹಾಗೂ ಎಐಡಿಎಸ್‌ಒ ಸಂಘಟನೆಗಳ ಜಿಲ್ಲಾ ಸಮಿತಿಗಳು ತೀವ್ರವಾಗಿ ಖಂಡಿಸಿವೆ.
ಈಗಾಗಲೇ ಗುಲ್ಬರ್ಗದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ಹಾಗೂ ಪಾಲಕರಿಗೆ ಎಐಎಂಎಸ್‌ಎಸ್‌ನ ಜಿಲ್ಲಾಧ್ಯಕ್ಷ ಡಾ. ಸೀಮಾ ದೇಶಪಾಂಡೆ, ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಮಹೇಶ ನಾಡಗೌಡ, ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ಶರ್ಮಾ ಅವರು ಭೇಟಿಯಾಗಿ ಸಾಂತ್ವಾನ ಹೇಳಿದರು.
ಆತಂಕಕಾರಿ ಘಟನೆ: ನಾಲ್ಕು ವರ್ಷದ ಮುಗ್ಧ ಬಾಲಕಿಯ ಮೇಲೆ ಪಕ್ಕದ ಮನೆಯ ಹುಡುಗನಿಂದ ನಡೆದ ಅತ್ಯಾಚಾರ ಕೃತ್ಯ ಹಾಗೂ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದು ಅತ್ಯಂತ ಆತಂಕಕಾರಿ ಎಂದು ಅಭಿಪ್ರಾಯಪಟ್ಟರು.
ಮನೆಯ ಮಕ್ಕಳನ್ನು ಶಾಲೆಗೆ, ಆಟವಾಡಲು ಅಥವಾ ಹೊರಗಡೆ ಕಳುಹಿಸಲು ಭಯ ಹುಟ್ಟಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶಾದ್ಯಂತ ಇಂತಹ ಪ್ರಕರಣಗಳ ವಿರುದ್ಧ ಲಕ್ಷಾಂತರ ವಿದ್ಯಾರ್ಥಿ ಯುವಜನ, ಮಹಿಳೆಯರು ಬೀದಿಗೆ ಬಂದು ಹೋರಾಟ ನಡೆಸಿದರೂ ಸರ್ಕಾರಗಳು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಬದಲಾಗಿ ಇಡೀ ದೇಶವನ್ನೇ ಸಾಂಸ್ಕೃತಿಕ ಬಿಕ್ಕಟ್ಟಿಗೆ ಸಿಲುಕಿಸಿ ಜನತೆಯನ್ನು ಅಭದ್ರತೆಗೆ ತಳ್ಳಿವೆ ಎಂದು ಹೇಳಿದರು.