ಮಹಿಳೆ ಸಬಲೀಕರಣಕ್ಕೆ ಮುನೀರ್ ಸಲಹೆ
ಯಾದಗಿರಿ: ಹೆಣ್ಣು ಮಕ್ಕಳ ಅನುಕೂಲಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತದೆ. ಹೀಗಾಗಿ ಮಹಿಳೆಯರ ಶಿಕ್ಷಣ ಮತ್ತು ಆರ್ಥಿಕತೆಯಿಂದ ಮಾತ್ರ ಸಬಲೀಕರಣ ಸಾಧ್ಯ ಎಂದು ನಗರಸಭೆ ಆಯುಕ್ತ ಮಹ್ಮದ್ ಮುನಿರ್ ಹೇಳಿದರು. ನಗರದ ನಜರೇತ ಕಾಲೋನಿಯಲ್ಲಿರುವ ಮದರ್ ತೆರೇಸಾ ಸ್ಕೂಲ್ ಆಫ್ ನರ್ಸಿಂಗ್ ಸಂಸ್ಥೆಯಲ್ಲಿ ನಗರಸಭೆ ಯಾದಗಿರಿ, ಸುವರ್ಣ ಜಯಂತಿ ಶಹರ್ ರೋಜಗಾರ ಯೋಜನೆ ಅಡಿಯಲ್ಲಿ ಹಾಗೂ ಮಲ್ಲಿಕಾರ್ಜುನ ಗ್ರಾಮೀಣ ಅಭಿವೃದ್ಧಿ ಸ್ವಯಂ ಸೇವಾ ಸಂಸ್ಥೆ ಗುಲ್ಬರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರ ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮ ಸ್ವಂತ ಬಲದ ಮೇಲೆ ನಿಲ್ಲಬೇಕು ಎಂದರು. 10ನೇ ಪಾಸಾದ ಹೆಣ್ಣು ಮಕ್ಕಳಿಗಾಗಿ ಸರ್ಕಾರ ಈ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಬಡ ವಿದ್ಯಾರ್ಥಿಗಳು ಸರ್ಕಾರದ ಈ ಸೌಲಭ್ಯವನ್ನು ಸದುಪಯೋಗವನ್ನು ಪಡೆಯಬೇಕೆಂದು ಮನವಿ ಮಾಡಿದರು. ಮಲ್ಲಿಕಾರ್ಜುನ ಗ್ರಾಮೀಣ ಅಭಿವೃದ್ಧಿ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷೆ ಸವಿತಾ ಎಂ. ಸಜ್ಜನ್ ಮಾತನಾಡಿ, ಮಹಿಳೆ ಆರ್ಥಿಕ ಭದ್ರತೆ ಹೊಂದಿದಾಗ ಮಹಿಳಾ ಸಬಲೀಕರಣ ಸಾಧ್ಯ. ಮಹಿಳೆ ಧರ್ಮ, ಸಂಪ್ರದಾಯದ ಚೌಕಟ್ಟಿನಿಂದ ಹೊರಬಂದು ಅಕ್ಷರಸ್ಥರಾಗಬೇಕು. ಸರ್ಕಾರ ವಿವಿಧ ಯೋಜನೆಗಳ ಲಾಭ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ಮಹಾಸಭಾ ಸದಸ್ಯ ಮಹೇಶ ಆನೆಗುಂದಿ, ಸಂಸ್ಥೆಯ ಅಧ್ಯಕ್ಷರಾದ ಜಾನ ಸನ್, ಶ್ಯಾಮಸುಂದರ್, ಸಂಚಾಲಕ ಕೋರಿ, ಶಿವಕುಮಾರ ಮಾಟಾಕುಂಟಿ, ಸುನಂದ ತಂಗಡಗಿ ಸೇರಿದಂತೆ ಮತ್ತಿತರು ಇದ್ದರು.