ಧರ್ಮ ರಕ್ಷಣೆಗೆ ಮುಂದಾಗಿ: ಕಾಶಿ ಶಿವಾಚಾರ್ಯ
ಕೆಂಭಾವಿ: 'ಧರ್ಮೋ ರಕ್ಷತಿ ರಕ್ಷಿತಃ' ಎಂಬ ಉಕ್ತಿಯಂತೆ ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ. ಅದರಂತೆ ಮಠ- ಮಾನ್ಯಗಳು ಧರ್ಮ ಮತ್ತು ಸಂಸ್ಕೃತಿ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಪ್ರತಿಯೊಬ್ಬರೂ ತಮ್ಮ ಧರ್ಮ ರಕ್ಷಣೆಯಲ್ಲಿ ತೊಡಗಬೇಕೆಂದು ಕಾಶಿ ಜಗದ್ಗುರು ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ಇಲ್ಲಿಗೆ ಸಮೀಪದ ಮಲ್ಲಾ(ಬಿ) ಗ್ರಾಮದಲ್ಲಿ ನೂತವಾಗಿ ನಿರ್ಮಾಣವಾದ ಸೂಗೂರೇಶ್ವರ ಹಿರೇಮಠಕ್ಕೆ ಭೇಟಿ ಕೊಟ್ಟು ನಂತರ ಆಶೀರ್ವಚನ ನೀಡುತ್ತಾ, ಸಮಾಜದ ಅಂಧಕರ ಹಾಗೂ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಬೇಕಾಗಿದ್ದು ಇದಕ್ಕೆ ಭಕ್ತರ ಪಾತ್ರ ಅತೀ ಅವಶ್ಯವಾಗಿದೆ ಎಂದರು.
ಮಠಗಳು ಮನುಷ್ಯನ ಮನಸ್ಸನ್ನು ಶುದ್ಧೀಕರೀಸಬೇಕಾದ ಧಾರ್ಮಿಕ ಕೇಂದ್ರಗಳಾಗಿದ್ದು, ಮಠದಿಂದ ಉತ್ತಮ ಸಂಸ್ಕಾರ ಹಾಗೂ ಅರಿವಿನ ಬೆಳಕು ಚೆಲ್ಲಬೇಕು. ಮಠದ ಏಳ್ಗೆಗೆ ಭಕ್ತರ ಕೊಡುಗೆ ಅವಶ್ಯವಿದೆ ಎಂದು ಹೇಳಿದರು. ಇದಕ್ಕೂ ಮೊದಲು ಗುರುಗಳನ್ನು ಪೂರ್ಣ ಕುಂಭದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಡ್ಡಪಲ್ಲಕ್ಕಿಯಲ್ಲಿ ಕೂಡಿಸಿ ಮೆರವಣಿಗೆಯೊಂದಿಗೆ ಮಠಕ್ಕೆ ಕರೆತರಲಾಯಿತು.
ಈ ಸಂದರ್ಭದಲ್ಲಿ ಮಾಗಣಗೇರಿ ಮಠದ ಡಾ. ವಿಶ್ವಾರಾಧ್ಯಾ ಶಿವಾಚಾರ್ಯರು, ನಗನೂರಿನ ಸೂಗೂರೇಶ್ವರ ಶಿವಾಚಾರ್ಯರು, ಕೆಂಭಾವಿಯ ಚನ್ನಬಸವ ಶಿವಾಚಾರ್ಯ, ನಾದದ ಶಿವಾನಂದ ಶಿವಾಚಾರ್ಯ, ಮಳ್ಳಿಯ ರುದ್ರಮುನಿ ಶಿವಾಚಾರ್ಯ, ಮಲ್ಲಾದ ಸೂಗೂರೇಶ್ವರ ಮಠದ ಚನ್ನವೀರ ಸ್ವಾಮಿ ಹಿರೇಮಠ ಸೇರಿದಂತೆ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.