ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 21
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಾತ್ಕಾಲಿಕ ಹಿನ್ನಡೆಯಾಗಿದ್ದು, ಬರುವ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ ರು.
ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಮಂಗಳವಾರ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಆತ್ಮಾವಲೋಕನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಂತ್ರಿಕವಾಗಿ ಬಿಜೆಪಿಗೆ ಹಿನ್ನಡೆಯಾಗಿದೆ. ಮೂರ್ನಾಲ್ಕು ಜಿಲ್ಲೆಗಳನ್ನು ಹೊರತುಪಡಿಸಿ ಎಲ್ಲ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ತಾವು ಪ್ರವಾಸ ಕೈಗೊಂಡು ಪ್ರಚಾರ ಮಾಡಿದ ಸಂದರ್ಭದಲ್ಲಿ ಉತ್ತಮ ಪ್ರತಿಕ್ರಿಯೆಯೇ ವ್ಯಕ್ತವಾಗಿತ್ತು. ಬಿಜೆಪಿ ಸರ್ಕಾರದ ಸಾಧನೆಯಿಂದ ಈ ಬಾರಿ ಬಿಜೆಪಿ ಸುಲಭವಾಗಿ ಬಹುಮತ ಪಡೆಯಲಿದೆ ಎಂಬ ವಿಶ್ವಾಸವೂ ಸಹ ಬಂದಿತ್ತು. ಆದರೆ, ವಿರೋಧ ಪಕ್ಷಗಳು ಭ್ರಷ್ಟಾಚಾರ, ಆಂತರಿಕ ಕಚ್ಚಾಟಗಳನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಅಪ್ರಚಾರ ಮಾಡಿರುವುದರಿಂದ ಅಭಿವೃದ್ಧಿ ಕಾರ್ಯಗಳು ಗೌಣವಾದವು. ಹೀಗಾಗಿ ಬಿಜೆಪಿ ಹಿನ್ನಡೆಯಾಗಲು ಕಾರಣವಾಯಿತು ಎಂದರು.
ತಪ್ಪು ಸರಿಪಡಿಸಿಕೊಂಡು ಲೋಕಸಭೆಗೆ ಸಿದ್ಧರಾಗಿ: ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಮುಖಂಡರು ಯಾವುದೇ ಕಾರಣಕ್ಕೂ ಎದೆಗುಂದದೆ ತಮ್ಮಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ಲೋಕಸಭಾ ಚುನಾವಣೆಗೆ ಸಿದ್ಧರಾಗಿ. ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿಯಾಗಿ ಮಾಡಲು ಎಲ್ಲರೂ ಈಗಿನಿಂದಲೇ ಪಕ್ಷ ಸಂಘಟನೆ ಮುಂದಾಗಿ ಎಂದು ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಕರೆ ನೀಡಿದರು.
ಕೇಂದ್ರ ಯುಪಿಎ ಸರ್ಕಾರದ ವ್ಯಾಪಕ ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆ ಸೇರಿದಂತೆ ಹಲವಾರು ಜನವಿರೋಧಿ ಧೋರಣೆಯಿಂದ ಜನತೆ ಬೇಸತ್ತು ಹೋಗಿದ್ದು, ಬರುವ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಬಹುಮತ ಪಡೆದು ಕೇಂದ್ರದಲ್ಲಿ ಆಡಳಿತಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಘಟನೆ ಬಲಪಡಿಸಿ: ಗುಲ್ಬರ್ಗ ಮತ್ತು ಬೀದರ್ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಹಾಗೂ ಮುಖಂಡರು ಈಗಿನಿಂದಲೇ ಪಕ್ಷದ ಸಂಘಟನೆ ಬಲಪಡಿಸಬೇಕು. ತಮ್ಮಲ್ಲಿರುವ ಸಣ್ಣ ತಪ್ಪುಗಳನ್ನು ಸರಿಪಡಿಸಿಕೊಂಡು ಎಲ್ಲರೂ ಒಗ್ಗೂಡಿ ಬಿಜೆಪಿ ಸಾಧನೆಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ಪಕ್ಷ ಸೋಲಲು ಕಾರಣ ಕಂಡುಕೊಂಡು ಅದನ್ನು ಸರಿಪಡಿಸಿ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಸಾಧಿಸಲು ರಾಜ್ಯದ ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಆತ್ಮಾವಲೋಕನ ಸಭೆ ನಡೆಸಲಾಗುತ್ತಿದೆ ಎಂದ ಶೆಟ್ಟರ್, ಪಕ್ಷ ಸೋತ ನಂತರ ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಆತ್ಮಾವಲೋಕನ ಸಭೆ ನಡೆಸುತ್ತಿರುವುದು ರಾಜ್ಯದ ಇತಿಹಾಸದಲ್ಲಿ ಬಿಜೆಪಿ ಮೊದಲು ಎಂಬ ಹೆಗ್ಗಲಿಕೆಗೆ ಪಾತ್ರವಾಗಲಿದೆ ಎಂದರು. ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ವಾಲ್ಮಿಕಿ ನಾಯಕ, ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಮರನಾಥ ಪಾಟೀಲ್, ರಘುನಾಥ ಮಲ್ಕಾಪುರೆ, ಮುಖಂಡರಾದ ವಿದ್ಯಾಸಾಗರ ಶಾಬಾದಿ, ವಿದ್ಯಾಸಾಗರ ಕುಲಕರ್ಣಿ, ಶರಣಪ್ಪ ತಳವಾರ, ಬಿ. ಜಿ. ಪಾಟೀಲ್. ರಾಜಗೋಪಾಲ ರೆಡ್ಡಿ, ರಮೇಶ ಯಾಕಾಪುರ, ಮಹಾಂತಗೌಡ ಪಾಟೀಲ್, ಜಿಲ್ಲಾಧ್ಯಕ್ಷ ರಾಜಕುಮಾರ ಪಾಟೀಲ್ ತೆಲ್ಕೂರ್, ಜಿಪಂ ಉಪಾಧ್ಯಕ್ಷ ಪಾರ್ವತಿ ಚವ್ಹಾಣ ಹಲವಾರು ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಯಾವುದೇ ಪಕ್ಷದಿಂದ ಬಿಜೆಪಿ ನಾಶವಾಗದು: ಮುಖ್ಯಮಂತ್ರಿಯಾಗಿ ವ್ಯಾಪಕ ಭ್ರಷ್ಟಾಚಾರ ನಡೆಸಿ ಬಿಜೆಪಿ ಸರ್ವನಾಶ ಮಾಡುವುದಾಗಿ ಶಪಥ ಮಾಡಿ ಪಕ್ಷದಿಂದ ಹೊರಬಂದ ಯಡಿಯೂರಪ್ಪ, ಕೆಜೆಪಿ ಪಕ್ಷ ಸ್ಥಾಪಿಸಿ ಕೇವಲ 6 ಸ್ಥಾನಗಳಲ್ಲಿ ತೃಪ್ತಿ ಪಡೆದುಕೊಂಡಿದ್ದಾರೆ. ಬಿಜೆಪಿ ಸರ್ವ ನಾಶ ಮಾಡುವುದು ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ ಎಂಬುದು ಅವರಿಗೀಗ ಅರಿವಾಗಿದೆ ಎಂದರು. ಅನುಕೂಲಸಿಂಧು ಮತ್ತು ವೈಯಕ್ತಿಕ ನೆಲೆಗಟ್ಟಿನ ಮೇಲೆ ಸ್ಥಾಪನೆಯಾಗಿರುವ ಕೆಜೆಪಿ ರಾಜ್ಯ ವಿಧಾನಸಭೆ ಚುನಾವಣೆ ನಂತರ ತನ್ನ ಅಸ್ತಿತ್ವ ಕಳೆದುಕೊಂಡಿದ್ದು, ಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸಂಪೂರ್ಣ ನಿರ್ನಾಮವಾಗಲಿದೆ ಎಂದರು.
ಆಪರೇಷನ್ ಕಮಲವೇ ಬಿಜೆಪಿ ಸೋಲಿಗೆ ಕಾರಣ: ಶಾಸಕಾಂಗ ಪಕ್ಷದ ಉಪ ನಾಯಕ ಕೆ.ಬಿ. ಶಾಣಪ್ಪ ಮಾತನಾಡಿ, ಯಡಿಯೂರಪ್ಪ ಮತ್ತು ಜನಾರ್ದನ ರೆಡ್ಡಿ ಅವರು ಆಪರೇಷನ್ ಕಮಲ ಆರಂಭಿಸಿದಾಗಲೇ ಪಕ್ಷದ ಕಡೆಗೆ ಜನತೆಯ ಪ್ರೀತಿ ಕಡಿಮೆಯಾಗಿತ್ತು. ಯಡಿಯೂರಪ್ಪ ಎಂಬ ಕಾಗೆ ಕೈಗೆ ಕಚೇರಿ ಕೊಟ್ಟಿರುವುದರಿಂದ ಕಚೇರಿಯೆಲ್ಲ ಹೊಲಸಾಗಿತ್ತು. ಅದನ್ನು ಸ್ವಚ್ಛಗೊಳಿಸುವಲ್ಲಿ ಬಿಜೆಪಿ ಸಫಲವಾಗಲಿಲ್ಲ. ಬಿಜೆಪಿ ಕೆಜೆಪಿ, ಬಿಎಸ್ಸಾರ್ ಆಗಿ ವಿಭಜನೆಗೊಂಡಿತ್ತು. ಈ ಎಲ್ಲ ಅಂಶಗಳನ್ನು ಗಮನಿಸಿರುವ ಮತದಾರರು ಈ ಬಾರಿ ಬಿಜೆಪಿಗೆ ಸೋಲಿಸಬೇಕೆಂಬ ನಿರ್ಣಯ ಕೈಗೊಂಡು ಸೋಲಿಸಿದ್ದಾರೆ ಎಂದರು.
ಬಿಜೆಪಿ ಸೋಲಿಗೆ ಜಗದೀಶ ಶೆಟ್ಟರ್ ಆಗಲಿ ಅಥವಾ ಪಕ್ಷದ ಯಾವುದೇ ಮುಖಂಡರಾಗಲಿ, ಕಾರ್ಯಕರ್ತರಾಗಲಿ ಕಾರಣರಲ್ಲ, ಬಿಜೆಪಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡರೂ ಅವುಗಳನ್ನು ಮರೆಮಾಚಿ ವಿರೋಧ ಪಕ್ಷಗಳ ಅಪ್ರಚಾರವೇ ಸೋಲಿಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಜಕೀಯ ಕುಸ್ತಿಯಲ್ಲಿ ಮತ್ತೆ ಗೆಲ್ಲುವೆ: ನಾನು ಮೂಲತಃ ಕುಸ್ತಿ ಪಟು ರಾಜಕೀಯ ಕುಸ್ತಿಯಲ್ಲಿ ಸೋತಿರುವೆ, ಮತ್ತೆ ಗೆಲವು ಸಾಧಿಸುವೆ ಎಂದು ಮಾಜಿ ಸಚಿವ ರೇವು ನಾಯಕ ಬೆಳಮಗಿ ಹೇಳಿದರು. ಸೋಲು- ಗೆಲವು ಸಮವಾಗಿ ಸ್ವೀಕರಿಸುವ ಮನೋಭಾವ ಹೊಂದಿದ್ದೇನೆ. ಪಕ್ಷ ಬಲವರ್ಧನೆಗೆ ಶ್ರಮಿಸುತ್ತೇನೆ. ಖರ್ಗೆ ಅಥವಾ ಸಿದ್ದರಾಮಯ್ಯ ಸಿಎಂ ಆಗಲಿ ಎಂಬ ಕಾರಣಕ್ಕಾಗಿ ಜನತೆ ಕಾಂಗ್ರೆಸ್ಗೆ ಮತ ನೀಡಿರುವುದರಿಂದ ಬಿಜೆಪಿ ಸೋಲಲು ಕಾರಣವಾಗಿದೆ ಎಂದರು