ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮಾನತಿಗೆ ದಸಂಸ ಒತ್ತಾಯ
ಶಹಾಪುರ: ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಈ ಹಿಂದೆ ರಾಯಭಾಗದಲ್ಲಿ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದು ಅವರ ವಿರುದ್ಧ ಲೋಕಾಯುಕ್ತ ನ್ಯಾಯಾಲಯವು ಅಪರಾಧವನ್ನು ಸಾಬೀತುಪಡಿಸಿದ್ದು, ಅವರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಮರೆಪ್ಪ ಕ್ರಾಂತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಅಧಿಕಾರಿಯು ಶಹಾಪುರಕ್ಕೆ ಬಂದ ನಂತರವೂ ಭಾಗ್ಯಲಕ್ಷ್ಮೀ ಬಾಂಡ್ ಇನ್ನಿತರ ಕೆಲಸಗಳಿಗೆ ಲಂಚ ನೀಡುವಂತೆ ಸಂಬಂಧಿಸಿದ ಮೇಲ್ವಿಚಾರಿಕೆಯರ ಮೂಲಕ ಆಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿರುವ ಸಂಘಟನೆ, ಸದರಿ ಅಧಿಕಾರಿಯ ಕಾರ್ಯ ನಿರ್ಲಕ್ಷತೆಗೆ ಸಾಕ್ಷಿಯಾಗಿದೆ. ತಕ್ಷಣವೇ ಇಂಥ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಬೇಕು. ಇಲ್ಲವಾದಲ್ಲಿ ಕಚೇರಿಗೆ ಬೀಗ ಮುದ್ರೆ ಹಾಕಿ ಪ್ರತಿಭಟನೆ ಮಾಡಲಾಗುವುದೆಂದು ಸಂಘಟಿಕರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶಿವಕುಮಾರ ತಳವಾರ, ದೇವಿಂದ್ರಪ್ಪ, ಬಾಬಾಸಾಹೇಬ, ತಿಪ್ಪಣ್ಣ ಇತರರು ತಿಳಿಸಿದ್ದಾರೆ