ಸಿದ್ದು ಘೋಷಣೆಗಳ ಹಿಂದೆ ಪೂರ್ವ ಸಿದ್ಧತೆ ಎಲ್ಲಿ?: ಶೆಟ್ಟರ್
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 21
ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಠಾತ್ ಜನಪ್ರಿಯ ಗಿಟ್ಟಿಸಿಕೊಳ್ಳುವ ಅವಸರದಲ್ಲಿ ಏಕಪಕ್ಷೀಯ ನಿರ್ಣಯ ಕೈಗೊಳ್ಳುತ್ತಿದ್ದಾರೆ, ಅದರಲ್ಲೂ ಬಿಜೆಪಿಯ ಕೆಲವು ಘೋಷಣೆಗಳನ್ನೇ ನಕಲು ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಮಂಗಳವಾರ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಆತ್ಮಾವಲೋಕನ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಅಗ್ಗದ ಬೆಲೆಯ ಅಕ್ಕಿ ಹಂಚಿಕೆ, ಮನೆಗಳ ನಿರ್ಮಾಣದಂತಹ ಯೋಜನೆಗಳೆಲ್ಲ ಬಿಜೆಪಿಯ ಕೂಸುಗಳು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವುಗಳನ್ನೇ ಘೋಷಿಸುತ್ತಿದ್ದಾರೆ. ಅವರ ಏಕಪಕ್ಷೀಯ ನಿರ್ಧಾರಗಳು ಕಾಂಗ್ರೆಸ್ನಲ್ಲಿ ಅಪಸ್ವರ ಮತ್ತು ಸಮಸ್ಯೆಗಳ ಸ್ಫೋಟಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಲಿದೆ ಎಂದರು.
ರಾಜ್ಯಾದ್ಯಂತ ವಿರೋಧ ಸಂಭವ: ಕಳೆದ 2008ರ ವಿಧಾನಸಭೆ ಚುನಾವಣೆಯಲ್ಲಿ 110 ಸ್ಥಾನಗಳು ಪಡೆದು ಸರ್ಕಾರ ರಚನೆಗೆ ಬೇಕಾದ ಪಕ್ಷೇತರ ಶಾಸಕರನ್ನು ತೆಗೆದುಕೊಂಡು ಅವರಿಗೆ ಸಚಿವ ಸ್ಥಾನ ನೀಡಿ ಹೇಗಾದರೂ ಮಾಡಿ ಸರ್ಕಾರದ ಅವಧಿ ಬಿಜೆಪಿ ಪೂರೈಸಿದೆ. ಆದರೆ, ಪ್ರಸ್ತುತ ಕಾಂಗ್ರೆಸ್ 121 ಸ್ಥಾನ ಗೆದ್ದು ಸ್ಪಷ್ಟ ಬಹುಮತ ಪಡೆದು ಆಡಳಿತ ನಡೆಸಿದ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರ ಏಕಪಕ್ಷೀಯ ನಿರ್ಧಾರದಿಂದ ಆರಂಭದಲ್ಲಿಯೇ ಅಪಸ್ವರ ಎದ್ದು ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ ಎಂದರು.
10 ಜಿಲ್ಲೆಗಳಲ್ಲಿ ಸಚಿವ ಸ್ಥಾನವೇ ಇಲ್ಲ: ಸಚಿವ ಸ್ಥಾನ ಹಂಚಿಕೆಯಲ್ಲಿ ಎಲ್ಲ ಜಿಲ್ಲೆಗಳಿಗೆ ಪ್ರಾತಿನಿಧ್ಯತೆ ನೀಡಿಲ್ಲ. ರಾಜ್ಯದ 10 ಜಿಲ್ಲೆಗಳಲ್ಲಿ ಸಚಿವ ಸ್ಥಾನವೇ ನೀಡಿಲ್ಲ. ಸಚಿವ ಸ್ಥಾನದಿಂದ ವಂಚಿತಗೊಂಡ ಶಾಸಕರು ಕಾಂಗ್ರೆಸ್ ಹೈಕಮಾಂಡ್ ಬಳಿ ಬೀಡು ಬಿಟ್ಟಿದ್ದಾರೆ. ಆರಂಭದಲ್ಲಿಯೇ ಅಪಸ್ವರ ಸ್ಫೋಟಗೊಂಡಿರುವ ಕಾಂಗ್ರೆಸ್ ಭವಿಷ್ಯದಲ್ಲಿ ಸುಭದ್ರ ಸರ್ಕಾರ ನೀಡುವುದು ಅನುಮಾನ ವ್ಯಕ್ತವಾಗುತ್ತಿದೆ ಎಂದರು.
ಅಕ್ಕಿ ಹಂಚಲು ಸಿದ್ಧತೆ ಮಾಡಿದ್ದೀರಾ?: 1ರಂತೆ ಕೆಜಿ ಅಕ್ಕಿ ಇದು ಬಿಜೆಪಿಯ ಚುನಾವಣೆ ಘೋಷಣೆ. ಇದನ್ನೇ ಕಾಂಗ್ರೆಸ್ ನಕಲು ಮಾಡಿದೆ. ಸಿಎಂ ಸಿದ್ದರಾಮಯ್ಯನವರಂತೂ ಈ ಆತುರದಲ್ಲಿ ಜೂನ್ ತಿಂಗಳಿಂದಲೇ ಈ ಯೋಜನೆ ಜಾರಿಗೊಳಿಸುವ ಮಾತನ್ನಾಡಿದ್ದಾರೆ. ಪೂರ್ವ ತಯಾರಿ ಎಲ್ಲಿದೆ, ಅಕ್ಕಿಗಾಗಿ ಕೇಂದ್ರದ ಮುಂದೆ ಬೇಡಿಕೆ ಈಗ ಇಡಲಾಗಿದೆ. ಅದು ಈಡೇರುವುವ ಲಕ್ಷಣಗಳು ಕ್ಷೀಣ. ಇಂತಹ ಘೋಷಣೆಗಳನ್ನು ಅಗ್ಗದ ಪ್ರಚಾರ ಗಿಟ್ಟಿಸಲು ಕಾಂಗ್ರೆಸ್ ಮಾಡುತ್ತಿದೆ ಎಂದು ಶೆಟ್ಟರ್ ಖೇದಪಟ್ಟರಲ್ಲದೆ ಇದರಿಂದ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೇ ಪೆಟ್ಟು ಬೀಳುತ್ತದೆ ಎಂದು ಭವಿಷ್ಯ ನುಡಿದರು.
ಜನರಿಗೆ ಮೋಸ ಮಾಡಬೇಡಿ: ವಸತಿ ಯೋಜನೆಯಡಿಯಲ್ಲಿ ಬಡವರಿಗೆ 1.25 ಲಕ್ಷ ಸಬ್ಸಿಡಿ ನೀಡುವುದಾಗಿ ಘೋಷಣೆ ಮಾಡಿರುವ ಸಿದ್ದರಾಮಯ್ಯನವರಿಗೆ ಈ ಹಿಂದೆ ಬಿಜೆಪಿ ಸರ್ಕಾರದ ಆಡಳಿತದಲ್ಲಿ 3 ಸಾವಿರ ಮನೆಗಳು ನಿರ್ಮಾಣ ಹಂತದಲ್ಲಿದ್ದು, ಅವು ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಬೇಕೆಂಬುದು ಗೊತ್ತಿಲ್ಲವೆ ಎಂದು ಪ್ರಶ್ನಿಸಿದ ಶೆಟ್ಟರ್, ತಮ್ಮ ಪ್ರಶ್ನೆಗೆ ಸಿದ್ದರಾಮಯ್ಯ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ದೂರಿದರು. ಬೇಗನೆ ಜನಪ್ರಿಯಗೊಳ್ಳುವ ಅವಸರದಲ್ಲಿ ಯಾವುದೇ ಪೂರ್ವ ತಯಾರಿ ಇಲ್ಲದೆ ಯೋಜನೆ ಘೋಷಿಸಿ ಜನರಿಗೆ ಮೋಸ ಮಾಡಬೇಡಿ ಎಂದು ಸಿಎಂಗೆ ಸಲಹೆ ನೀಡಿದರು.
ಕಲಂ 371(ಜೆ) ನಿಯಮಾವಳಿ ರೂಪಿಸಿ: ಕೂಡಲೇ ರಾಜ್ಯ ಸಚಿವ ಸಂಪುಟ ಸಭೆ ಕರೆದು ಹೈ-ಕ ಭಾಗದ ಜನರ ಬಹುದಿನಗಳ ಬೇಡಿಕೆ 371(ಜೆ) ವಿಧಿಗೆ ನಿಯಮಾವಳಿ ರೂಪಿಸಿ ಕಾನೂನು ಆಗಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದರು.
ಕೇಂದ್ರ ಯುಪಿಎ ಸರ್ಕಾರದ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ಧೋರಣೆಯನ್ನು ಖಂಡಿಸಿ ಬಿಜೆಪಿ ಮೇ 27ರಂದು ರಾಜ್ಯಾದ್ಯಂತ ಜೈಲ್ ಭರೋ ಚಳವಳಿ ನಡೆಸುವ ಮೂಲಕ ಹಿನ್ನಡೆಯಾಗಿರುವ ಪಕ್ಷ ಮುನ್ನಡೆ ಸಾಧಿಸಲಿದೆ ಎಂದು ಶೆಟ್ಟರ್ ಹೇಳಿದರು.
ಸಭೆಯಲ್ಲಿ ಮಾಜಿ ಸಚಿವ ರೇವು ನಾಯಕ ಬೆಳಮಗಿ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ವಾಲ್ಮೀಕಿ ನಾಯಕ, ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಶಾಸಕಾಂಗ ಪಕ್ಷದ ಉಪ ನಾಯಕ ಕೆ.ಬಿ. ಶಾಣಪ್ಪ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಮರನಾಥ ಪಾಟೀಲ್, ರಘುನಾಥ ಮಲ್ಕಾಪುರೆ, ಮುಖಂಡರಾದ ವಿದ್ಯಾಸಾಗರ ಶಾಬಾದಿ, ವಿದ್ಯಾಸಾಗರ ಕುಲಕರ್ಣಿ, ಶರಣಪ್ಪ ತಳವಾರ, ಬಿ.ಜಿ. ಪಾಟೀಲ್. ರಾಜಗೋಪಾಲ ರೆಡ್ಡಿ, ರಮೇಶ ಯಾಕಾಪುರ, ಮಹಾಂತಗೌಡ ಪಾಟೀಲ್, ಜಿಲ್ಲಾಧ್ಯಕ್ಷ ರಾಜಕುಮಾರ ಪಾಟೀಲ್ ತೆಲ್ಕೂರ್, ಜಿಪಂ ಉಪಾಧ್ಯಕ್ಷ ಪಾರ್ವತಿ ಚವ್ಹಾಣ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.