ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸೇವೆ ಅವಕಾಶ ಕಲ್ಪಿಸಿದವರಿಗೆ ಸಚಿವ ಡಾ. ಪಾಟೀಲ್ ಕೃತಜ್ಞತೆ

Rashmi Kasaragodu
Updated On : 22 May 2013, 11:06 am

ಕನ್ನಡಪ್ರಭ ವಾರ್ತೆ, ಸೇಡಂ, ಮೇ 21
ರಾಜ್ಯದ ಸೇವೆ ಮಾಡಲು ಅವಕಾಶ ಮಾಡಿಕೊಡುವ ದೃಷ್ಟಿಯಿಂದ ತಾಲೂಕಿನ ಜನ ನನ್ನನ್ನು ಮೂರು ಬಾರಿ ನಿರಂತರವಾಗಿ ಆರಿಸಿ ಕಳುಹಿಸಿದ್ದು, ಮತಕ್ಷೇತ್ರದ ಜನತೆಗೆ ನಾನು ಕೃತಜ್ಞ ಎಂದು ನೂತನ ವೈದ್ಯಕೀಯ ಶಿಕ್ಷಣ ರಾಜ್ಯ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು. ಇಲ್ಲಿನ ಕೊತ್ತಲ ಬಸವೇಶ್ವರ ದೇವಾಲಯದ ಹೊರಾಂಗಣದಲ್ಲಿ ಸೇಡಂ- ಮುಧೋಳ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಪಟ್ಟಣಕ್ಕೆ ಪ್ರಥಮ ಬಾರಿಗೆ ವೈದ್ಯಕೀಯ ಶಿಕ್ಷಣ ರಾಜ್ಯ ಸಚಿವರಾಗಿ ಆಗಮಿಸಿದ ಪ್ರಯುಕ್ತ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ತಾಲೂಕಿನ ಅಭಿವೃದ್ಧಿಗಾಗಿ ಸಹಕಾರ ನೀಡದ ಅಧಿಕಾರಿಗಳಿಗೆ ನಮ್ಮ ತಾಲೂಕಿನಲ್ಲಿ ಜಾಗ ಇಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಈವರೆಗೆ ಒಬ್ಬ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಇನ್ನಷ್ಟು ಕಾರ್ಯಗಳು ಬಾಕಿ ಇದ್ದು ಅವುಗಳನ್ನು ಪೂರ್ಣಗೊಳಿಸಲು ಶ್ರಮಿಸುವುದಾಗಿ ತಿಳಿಸಿದ ಅವರು, ನಾನಿನ್ನು ತುಂಬಾ ಚಿಕ್ಕವನು. ಮಾಡಬೇಕಾದ ಕೆಲಸಗಳಿಗೆ ಮಾರ್ಗದರ್ಶನ ಮತ್ತು ಸಲಹೆಗಳನ್ನು ಸ್ವಾಗತಿಸುವುದಾಗಿ ತಿಳಿಸಿದರು.
ಪಾರದರ್ಶಕ ಆಡಳಿತ: ರಾಜ್ಯದ ಬಡ ಪ್ರತಿಭಾನ್ವಿತ ಮಕ್ಕಳ ಹಿತ ಕಾಪಾಡುವೆ. ಮತಕ್ಷೇತ್ರದ ಅಭಿವೃದ್ಧಿ ಮತ್ತು ಸತ್ಯ, ನ್ಯಾಯದ ಪರವಾಗಿ ಕಾರ್ಯ ಮಾಡುತ್ತೇನೆ. ಕಳೆದ 8 ವರ್ಷಗಳ ರಾಜ್ಯದಲ್ಲಿನ ದುರಾಡಳಿತದ ನಂತರ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪಾರದರ್ಶಕ, ಜನಪರ ಆಡಳಿತ ನೀಡುವುದಾಗಿ ಹೇಳಿದರು.
ಪ್ರತಿಪಕ್ಷವನ್ನು ವಿರೋಧಿಸುವ ಕಾರ್ಯ ನನ್ನ ಜಾಯಮಾನದಲ್ಲೇ ಮಾಡಿಲ್ಲ ಎಂದು ಘಂಟಾಘೋಷವಾಗಿ ಘೋಷಿಸಿದ ಸಚಿವ ಪಾಟೀಲ್, ಪ್ರಾಮಾಣಿಕ, ನಿಷ್ಪಕ್ಷಪಾತ ಕೆಲಸ ಮಾಡಿದಲ್ಲಿ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದರು.
ಈ ವೇಳೆ ಚಂದ್ರಿಕಾ ಪರಮೇಶ್ವರ, ಜಿಪಂ ಸದಸ್ಯ ವೀರಾರೆಡ್ಡಿ ಹೂವಿನಬಾವಿ, ಹಾಪ್‌ಕಾಮ್ಸ್ ಉಪಾಧ್ಯಕ್ಷ ಬಸವರಾಜ ಪಾಟೀಲ್, ಚನ್ನಾರೆಡ್ಡಿ ಪಾಟೀಲ್ ಬೆನಕನಹಳ್ಳಿ, ಮಹಾಂತಪ್ಪ ಸಂಗಾವಿ, ಧೂಳಪ್ಪ ದೊಡ್ಡಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ವರರಾವ ಮಾಲಿಪಾಟೀಲ್, ಮಾಜಿ ಶಾಸಕ ನಾಗರೆಡ್ಡಿ ಪಾಟೀಲ್, ಸಿದ್ದಣ್ಣ ಪಾಟೀಲ್, ಎಪಿಎಂಸಿ ಅಧ್ಯಕ್ಷ ನಾಗೇಂದ್ರಪ್ಪ ರುದನೂರ, ವೀರಣ್ಣ ಸಾಹುಕಾರ ತಂಬಾಕೆ, ಜಿಂಜಾನೆ ಜಾಗಿರದಾರ, ಮಧುಸೂಧನರೆಡ್ಡಿ, ಅಬ್ದುಲ್ ಗಫೂರ್, ಪ್ರಭಾವತಿ ಪಾಟೀಲ್, ಸಿದ್ದಣ್ಣಗೌಡ ಪಾಟೀಲ್, ಶಂಭುರೆಡ್ಡಿ ಮದ್ನಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಮೆರವಣಿಗೆ: ನೂತನ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರಾಗಿ ಆಗಮಿಸಿದ ಡಾ. ಶರಣಪ್ರಕಾಶ ಪಾಟೀಲರವರಿಗೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ವಿಜೃಂಭಣೆಯಿಂದ ಸ್ವಾಗತಿಸಿದರು. ಗುಲ್ಬರ್ಗ ಕ್ರಾಸ್‌ದಿಂದ ಹೊರಟ ಮೆರವಣಿಗೆ ಮುಖ್ಯ ರಸ್ತೆ ಮಾರ್ಗವಾಗಿ ಕೊತ್ತಲ ಬಸವೇಶ್ವರ ದೇವಾಲಯದವರೆಗೆ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ಜರುಗಿತು. ಇದೇ ಸಂದರ್ಭದಲ್ಲಿ ನಡೆದ ಪಟಾಕಿ, ಮದ್ದು ಗುಂಡಿನ ಸದ್ದು ಆಕಾಶ ಮುಟ್ಟಿತ್ತು. ಡೊಳ್ಳು ಕುಣಿತ, ಬೊಂಬೆ ಆಟ ಮನಸೂರೆಗೊಂಡವು. ಸಚಿವರ ಸ್ವಾಗತಕ್ಕಾಗಿ ನೂರಾರು ಫ್ಲೆಕ್ಸ್  ರಾರಾಜಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement