25ಕ್ಕೆ 'ಪಿಯುಸಿ ನಂತರ ಮುಂದೇನು?' ಕಾರ್ಯಾಗಾರ
ಬೀದರ್: ಪಿಯುಸಿ ನಂತರ ಮುಂದೇನು ಎನ್ನುವ ವಿಷಯದ ಬಗ್ಗೆ ಬೀದರಿನ ರಂಗ ಮಂದಿರದಲ್ಲಿ ಮೇ 25ಕ್ಕೆ ಕಾರ್ಯಾಗಾರ ಏರ್ಪಡಿಸಲಾಗಿದೆ.ಅಂದು ಬೆಳಿಗ್ಗೆ 10 ಗಂಟೆಗೆ ದಿ ಹಿಂದೂ ಪತ್ರಿಕೆಯಿಂದ ಹಮ್ಮಿಕೊಳ್ಳಲಾದ ಕಾರ್ಯಾಗಾರವನ್ನು ಕರ್ನಾಟಕ ಪಶುವೈದ್ಯ ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ. ರೇಣುಕಾಪ್ರಸಾದ ಉದ್ಘಾಟಿಸಲಿದ್ದಾರೆ. ಕೃಷಿ ಹಾಗೂ ಪಶು ವಿಜ್ಞಾನದಲ್ಲಿ ಉನ್ನತ ಶಿಕ್ಷಣದ ಬಗ್ಗೆ ಮಾತನಾಡಲಿದ್ದಾರೆ.ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೆ. ವೀರಭದ್ರಪ್ಪ ಅವರು ವೈದ್ಯ ಹಾಗೂ ಎಂಜಿನಿಯರಿಂಗ್ ಕಾಲೇಜುಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ ಆನ್ ಲೈನ್ ಕೌನ್ಸಲಿಂಗ್ ಕುರಿತು ವಿವರ ನೀಡಲಿದ್ದಾರೆ. ಜಿಲ್ಲಾಧಿಕಾರಿ ಪಿ.ಸಿ ಜಾಫರ್ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣದ ಅವಕಾಶಗಳ ಬಗ್ಗೆ ತಿಳಿಸಿಕೊಡಲಿದ್ದಾರೆ. ಕೃಷಿ ವಿಶ್ವವಿದ್ಯಾಲಯದ ಡಾ. ಎಸ್ ರವಿ, ಭೀಮಣ್ಣ ಖಂಡ್ರೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಪ್ರಾಂಶುಪಾಲ ಡಾ. ಬಿಪಿನ್ ಬಿಹಾರಿ ಲಾಲ್ ಹಾಗೂ ರಾಜೀವ ಗಾಂಧಿ ವೈದ್ಯ ಶಿಕ್ಷಣ ವಿಶ್ವವಿದ್ಯಾಲಯದ ಪ್ರತಿನಿಧಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹಿರಿಯ ಅಧಿಕಾರಿ ಉನ್ನತ ಶಿಕ್ಷಣ ಸಾಲ ಸೌಲಭ್ಯಗಳ ಬಗ್ಗೆ ತಿಳಿಸಲಿದ್ದಾರೆ. ಉಚಿತ ಪ್ರವೇಶವಿದ್ದು ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಬೇಕೆಂದು ಕೋರಿದ್ದಾರೆ.