ಉದ್ಧಾರವಾದೀತೆ ಗುಲ್ಬರ್ಗ ಅರ್ಬುದ ಕೇಂದ್ರ?
ಶೇಷಮೂರ್ತಿ ಅವಧಾನಿ
ಕ.ಪ್ರ. ವಾರ್ತೆ ಗುಲ್ಬರ್ಗ ಮೇ 22
ದಶಕಗಳಿಂದ ಯಾವುದೇ ಸುಧಾರಣೆ ಕಾಣದೆ ಅಪಸವ್ಯಗಳ ಕೂಪವಾಗಿರುವ ಇಲ್ಲಿನ ಪೆರಿಫೆರಲ್ ಅರ್ಬುದ (ಕ್ಯಾನ್ಸರ್) ಕೇಂದ್ರ ಹೈ-ಕ ಬಡ ಕ್ಯಾನ್ಸರ್ ರೋಗಿಗಳಿಗೆ ಮತ್ತೆ ತೆರೆದುಕೊಳ್ಳುವುದೆ?
ಗುಲ್ಬರ್ಗದವರೇ ಆಗಿರುವ ವೈದ್ಯ ಡಾ. ಶರಣಪ್ರಕಾಶ ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ಬೆನ್ನಲ್ಲೇ ಇಲ್ಲಿನ ಜನಮನದಲ್ಲಿ ಇಂಥದ್ದೊಂದು ಆಸೆ ಹುಟ್ಟಿ ಕೊಂಡಿದೆ.
ಶಾಸಕರಾಗಿದ್ದಾಗ ಖುದ್ದು ಡಾ. ಶರಣಪ್ರಕಾಶ್ ಅವರೇ ಈ ಕೇಂದ್ರದ ಸೇವೆ ಸ್ಥಗಿತಗೊಳಿಸಿದ್ದ ಅರ್ಬುದ ಕೇಂದ್ರದ ಕುರಿತು ಅಸೆಂಬ್ಲಿಯಲ್ಲಿ ಪ್ರಶ್ನೆ ಕೇಳಿ ಆಗಿನ ವೈದ್ಯಕೀಯ ಶಿಕ್ಷಣ ಸಚಿವ ರಾಮದಾಸ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಇಲ್ಲಿಯವರೇ ವೈದ್ಯಕೀಯ ಶಿಕ್ಷಣ ಸಚಿವರಾದ ಕಾರಣ ಈ ಕೇಂದ್ರದ ಬಾಗಿಲು ತೆರೆಯುವ ಅವಕಾಶ ತಾನಾಗಿಯೇ ಕೂಡಿ ಬಂದಂತಾಗಿದೆ.
1990 ರಲ್ಲಿ ಸ್ಥಾಪನೆ: ಬೆಂಗಳೂರಿನ ಕಿದ್ವಾಯಿ ಗ್ರಂಥಿ ಸಂಸ್ಥೆಯ ಹೆಸರಾಂತ ನಿರ್ದೇಶಕ ಡಾ. ಕೃಷ್ಣ ಭಾರ್ಗವ ಅವರ ದೂರದೃಷ್ಟಿಯ ಫಲವಾಗಿ 90ರ ದಶಕದಲ್ಲೇ ಈ ಕೇಂದ್ರ ಕಾರ್ಯಾರಂಭಗೊಂಡಿತ್ತು.
ಸ್ಥಳೀಯವಾಗಿ ಉದ್ಯಮಿ ವಿಠ್ಠಲರಾವ್ ತುಕಾರಾಂ ಸುತ್ರಾವೆ, ಲಾಹೋಟಿ, ಪಾಟೀಲ್ರಂಥ ದಾನಿಗಳ ಉದಾರ ದೇಣಿಗೆ, ಡಾ. ರಾಜಕುಮಾರ್, ಮಹೇಂದ್ರ ಕಪೂರ್ ಸಂಗೀತ ಸಂಜೆ ನಡೆಸಿ ಸಂಗ್ರಹಿಸಿದ ಹಣ, ಕೇಂದ್ರ, ರಾಜ್ಯಗಳ ಅನುದಾನ ಹೀಗೆ ಸಂಗ್ರಹವಾದ 36 ಲಕ್ಷ ವೆಚ್ಚದಲ್ಲಿ ಕ್ಯಾನ್ಸರ್ ಕೇಂದ್ರ ಸ್ಥಾಪನೆಯಾಗಿದೆಯಾದರೂ ಇಂದಿಗೂ ಸ್ಥಾಪನೆಯ ಹಿಂದಿನ ಗುರಿ- ಉದ್ದೇಶಗಳು ಮಾತ್ರ ಈಡೇರಿಲ್ಲ.
ಇಲ್ಲಿನ ಸರ್ಕಾರಿ ಜಿಲ್ಲಾಸ್ಪತ್ರೆಯ ಅಂಗಳದ ಹಿಂಭಾಗದಲ್ಲೇ 50 ಹಾಸಿಗೆಗಳ ಸುಸಜ್ಜಿತ ಕೇಂದ್ರವಿದ್ದರೂ ಕಿದ್ವಾಯಿ ಸಂಸ್ಥೆಯ ಉಪೇಕ್ಷೆ, ಸ್ಥಳೀಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಇಂದು ಕ್ಯಾನ್ಸರ್ ಪೀಡಿತ ಹೈ-ಕ ಬಡ ರೋಗಿಗಳ ಪಾಲಿಗೆ ಈ ಕೇಂದ್ರ ಮರೀಚಿಕೆಯಾಗಿದೆ.
ರೆಡಿಯೇಷನ್ ವಿಭಾಗ, ನ್ಯೂಕ್ಲಿಯರ್ ಮೆಡಿಸಿನ್ ವಿಭಾಗ ಇತ್ಯಾದಿ ಸುಸಜ್ಜಿತ ವಿಭಾಗಗಳು, ಆಧುನಿಕ ಯಂತ್ರೋಪಕರಣಗಳನ್ನು ಈ ಕೇಂದ್ರ ಹೊಂದಿದ್ದರೂ ಇವುಗಳನ್ನು ನಿರ್ವಹಿಸಬಲ್ಲ ತಾಂತ್ರಿಕ ನಿಪುಣತೆಯ ಸಿಬ್ಬಂದಿ ಇಲ್ಲಿಲ್ಲ. ಇದರಿಂದ ಈ ಕೇಂದ್ರ ಕ್ಯಾನ್ಸರ್ ಪೀಡಿತರ ಚಿಕಿತ್ಸೆಗೆ ಒದಗಿದ್ದೇ ಕಮ್ಮಿ.
36 ಸಿಬ್ಬಂದಿ ವರ್ಗ: ಈ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಪ್ರಭಾರಿ ವೈದ್ಯಾಧಿಕಾರಿ ಸೇರಿ ನರ್ಸ್, ದಾದಿಯರು, ಡಿ ಗುಂಪಿನ ನೌಕರರು ಸೇರಿದಂತೆ 36 ಸಿಬ್ಬಂದಿಯನ್ನು ವರ್ಗಾಯಿಸಿ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಕೇಂದ್ರಕ್ಕೆ ನಿಯೋಜಿಸಿರುವ ಕ್ರಮ ಮೊದಲೇ ಸೌಲಭ್ಯ ಕೊರತೆಯಿಂದ ನರಳುತ್ತಿರುವ ಕ್ಯಾನ್ಸರ್ ಕೇಂದ್ರದಲ್ಲಿ ಯಂತ್ರಪಕರಣಗಳಿದ್ದರೂ ತಂತ್ರಜ್ಞರಿಲ್ಲ.
ಇತ್ತೀಚೆಗೆ ಕ್ಯಾನ್ಸರ್ ಪೀಡೆ ಹೈ-ಕ ಜಿಲ್ಲೆಗಳಲ್ಲಿ ಹಿಂದಿಗಿಂತಲೂ ಅಧಿಕವಾಗಿದೆ ಎಂಬುದು ತಜ್ಞರ ಮಾತು. ಚಿಕಿತ್ಸೆಯೊಂದಿಗೇ ಕ್ಯಾನ್ಸರ್ ಮುನ್ನೆಚ್ಚರಿಕೆ, ಜಾಗೃತಿ ಆಂದೋಲನಗಳಿಗೂ ಈ ಕೇಂದ್ರವನ್ನು ಬಳಸಬೇಕಾದ ಅಗತ್ಯವಿದೆ.
ಗುಲ್ಬರ್ಗದಲ್ಲಿರುವ ಪೇರಿಫೆರಲ್ ಕ್ಯಾನ್ಸರ್ ಕೇಂದ್ರವನ್ನು ಸರ್ಕಾರವೇ ಮುತುವರ್ಜಿಯಿಂದ ನಡೆಸುವಂತಾಗಬೇಕು. ಇಲ್ಲಿನ ಕ್ಯಾನ್ಸರ್ ರೋಗಿಗಳು ರೇಡಿಯೇಷನ್ ಥೇರಪಿಗೂ ಸೊಲ್ಲಾಪೂರ, ಹೈದರಾಬಾದ್ಗೆ ಹೋಗುವಂತಾಗಿದೆ. ಸ್ಥಳೀಯವಾಗಿಯೇ ಈ ಚಿಕಿತ್ಸೆ ದೊರೆತರೆ ಬಡವರಿಗೆ ಅನುಕೂಲವಾಗಲಿದೆ.
- ಡಾ. ಮಲ್ಹಾರರಾವ್ ಮಲ್ಲೆ, ಗುಲ್ಬರ್ಗ