ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪಿಂಚಣಿ ಹಕ್ಕು ಕಾಯ್ದೆ ರಚನೆಗೆ ಶಿಫಾರಸು

Rashmi Kasaragodu
Updated On : 23 May 2013, 11:31 am

ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮೇ 22
ದುಡಿಯುವ ಎಲ್ಲ ವರ್ಗದವರಿಗೆ ಸಾಮಾಜಿಕ ಭದ್ರತೆ ಒದಗಿಸಲು ಶಿಕ್ಷಣ ಹಕ್ಕು ಕಾಯಿದೆ ಮಾದರಿಯಲ್ಲಿಯೇ ಕೆಲಸ (ಉದ್ಯೋಗ) ಮತ್ತು ಪಿಂಚಣಿ ಹಕ್ಕು ಕಾಯಿದೆ ರಚಿಸುವಂತೆ ಸೊಷಿಯಲ್ ಎಕ್ಯೂರಿಟಿ ವಿಥ್ ಸ್ಪೇಷಲ್ ರೆಫರೆನ್ ಅಶ್ಯೂರ್ಡ್‌ಪೆನಷನ್ ಇಂಡೆಕ್ಷನ್ ಫಾರ್ ಆಲ್ ವರ್ಕರ್ಸ್ ಸಮಿತಿ ಶಿಫಾರಸು ಮಾಡಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಅವರು ಗುಲ್ಬರ್ಗದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಮನಮೋಹನಸಿಂಗ್ ಸೂಚನೆಯಂತೆ ಈ ಸಮಿತಿಯನ್ನು ರಚನೆ ಮಾಡಲಾಗಿತ್ತು. ಈ ಕುರಿತು ಈಚೆಗೆ ನಡೆದ 45ನೇ ಭಾರತೀಯ ಕಾರ್ಮಿಕರ ಸಮಾವೇಶದಲ್ಲಿ ಪ್ರಧಾನಿ ಘೋಷಣೆ ಮಾಡಿದ್ದು, ಗುರುವಾರ ಪ್ರಧಾನಿಗಳನ್ನು ಭೇಟಿಯಾಗಿ ಶಿಫಾರಸ್ಸುಗಳಿರುವ ವರದಿಯನ್ನು ಸಲ್ಲಿಸಲಾಗುವುದು ಎಂದರು.
ಅಸಂಘಟಿತ ವಲಯದಲ್ಲಿನ ಕಾರ್ಮಿಕರು ಸೇರಿದಂತೆ ಎಲ್ಲ ದುಡಿಯುವ ವರ್ಗಕ್ಕೆ ಪಿಂಚಣಿ ನೀಡಬೇಕು ಎಂದು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅದಕ್ಕಾಗಿ ರಾಷ್ಟ್ರೀಯ ಸುರಕ್ಷಾ ನಿಧಿಯನ್ನು ಸ್ಥಾಪಿಸುವ ಚಿಂತನೆ ನಡೆದಿದೆ. ಅಲ್ಲದೆ ಇಪಿಎಫ್ ಭರಿಸುವ ಕಾರ್ಮಿಕರಿಗೆ ಕನಿಷ್‌ಠ ಸಾವಿರ ರು. ಪಿಂಚಣಿ ನೀಡಬೇಕು ಎಂದು ಹೇಳಿದ್ದು, ಅದಕ್ಕಾಗಿ 1995ರ ಕಾಯಿದೆಯಲ್ಲಿ ಕೆಲಮೊಂದು ಬದಲಾವಣೆಗಳನ್ನು ಮಾಡುವಂತೆ ತಿಳಿಸಲಾಗಿದೆ ಎಂದರು.
ಗ್ರಾಮೀಣರಿಗೆ ಉದ್ಯೋಗ: ಗ್ರಾಮೀಣ ಭಾಗದಲ್ಲಿರುವ ನಿರುದ್ಯೋಗಿ ಯುವಕರಿಗೆ ಅಗತ್ಯವಿರುವ ಉದ್ಯೋಗಗಳನ್ನು ಕಲ್ಪಿಸಲು ಹೆಚ್ಚಿನ ಒತ್ತು ನೀಡಲು ಯೋಜಿಸಲಾಗಿದೆ. ಅದಕ್ಕೆ ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿ ನೀಡುವುದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಖರ್ಗೆ ತಿಳಿಸಿದರು.
ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯೋಗ ಹೆಚ್ಚಿನ ಪ್ರಮಾಣದಲ್ಲಿ ಆರಂಭಿಸಲು, ಅಲ್ಲಿ ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿಸಲಾಗುವುದು. ಅಗತ್ಯವಿರುವ ಕಡೆಗಳಲ್ಲಿ ಕಾರ್ಮಿಕರ ಬೇಡಿಕೆಯಂತೆ ಮಾರುಕಟ್ಟೆ ಆರಂಭಿಸಲು ಮತ್ತು ರಾಷ್ಟ್ರೀಯ ಉದ್ಯೋಗ ನೀತಿಯನ್ನು ರೂಪಿಸುವ ಚಿಂತನೆ ನಡೆದಿದೆ ಎಂದರು.
ಪರಿಶೀಲನೆ ಸಮಿತಿ: ಈಚೆಗೆ ನಡೆದ 45ನೇ ಕಾರ್ಮಿಕ ಸಮಾವೇಶದಲ್ಲಿ ಕೈಗೊಂಡಿರುವ ನಿರ್ಣಯಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಅವನ್ನು ಜಾರಿಗೊಳಿಸುವ ಸಲುವಾಗಿ ಪರಿಶೀಲನೆ ನಡೆಸಲು ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಪರಾಮರ್ಶೆ ಮಾಡಿದ ನಂತರ ಮುಂದಿನ ಹೆಜ್ಜೆ ಇಡಲಾಗುವುದು ಎಂದರು.
ಬೇಡಿಕೆಯಂತೆ ಕಾರ್ಮಿಕರ ಶೋಷಣೆ ತಡೆಯಲು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ಖರ್ಗೆ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement