ಕಬ್ಬಿನ ಬಾಕಿ ಬಿಲ್: ರೈತರ ಅಹೋರಾತ್ರಿ ಧರಣಿ
ಗುಲ್ಬರ್ಗ: ಕಬ್ಬು ಪೂರೈಸಿರುವ ತಮಗೆ ಬರಬೇಕಾಗಿರುವ ಬಾಕಿ ಹಣ ಪಾವತಿಸಬೇಕು ಎಂದು ಆಗ್ರಹಿಸಿ ರೈತರು ಆಳಂದ ಸಮೀಪದ ಎಸ್ಎಸ್ಎಲ್ ಸಕ್ಕರೆ ಕಾರ್ಖಾನೆ ಮುಂದೆ ಬುಧವಾರ ಅಹೋರಾತ್ರಿ ಧರಣಿ ನಡೆಸಿದರು.
ರೈತ ಮುಖಂಡ ಧರ್ಮರಾಜ ಸಾಹು ನೇತೃತ್ವದಲ್ಲಿ ರೈತರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಕಳೆದ ಫೆಬ್ರುವರಿ 11 ರಿಂದ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್ಗೆ 2300 ಪಾವತಿಸಬೇಕು ಎಂದು ಅವರು ಆಗ್ರಹಿಸಿದರು.
ಕಾರ್ಖಾನೆಯಿಂದ ರೈತರಿಗೆ 61 ಕೋಟಿ ಬಾಕಿ ಬರಬೇಕಾಗಿದೆ. ಹತ್ತು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಹಣ ಪಾವತಿ ಮಾಡದಿದ್ದರೆ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಬ್ಬು ಪೂರೈಸಿದ ಸಾರಿಗೆ ವಾಹನಗಳ ಬಿಲ್ ಕೂಡ ಆಡಳಿತ ಮಂಡಳಿ ಇದುವರೆಗೂ ಪಾವತಿಸಿಲ್ಲ. ಸ್ಥಳೀಯ ರೈತರಿಗೂ ವಂಚನೆ ಮಾಡುತ್ತಿದೆ. ಬಾಕಿ ಬಿಲ್ ಪಾವತಿ ಮಾಡುವಂತೆ ಕೇಳಿದರೆ ರೈತರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕಲ್ಲು ತೂರಾಟ: ಮಂಗಳವಾರ ರಾತ್ರಿ ಆಡಳಿತ ಮಂಡಳಿಯೊಂದಿಗೆ ಹಣ ಪಾವತಿಸುವ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆಯಲ್ಲಿ ಉದ್ರಿಕ್ತ ರೈತರು ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಿಂದಾಗಿ ಕೆಲ ಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಸುದ್ದಿ ತಿಳಿದ ಕೂಡಲೇ ನಿಂಬರ್ಗಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು. ಈ ಘಟನೆಯಲ್ಲಿ ಕಚೇರಿ ಕಿಟಕಿ ಗ್ಲಾಸುಗಳು ಪುಡಿಪುಡಿಯಾದವು.
ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಮಾತುಕತೆ ಮುಂದುವರಿದಿದ್ದು, ಕಾರ್ಖಾನೆಯ ಆವರಣದಲ್ಲಿ ಮಾತ್ರ ಉದ್ರಿಕ್ತ ವಾತಾವರಣ ಮುಂದುವರಿದಿದೆ.