ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜೇವರ್ಗಿ; ಕುಡಿವ ನೀರಿನ ಸಮಸ್ಯೆ ನೀಗಿಸಲು ಅಜಯಸಿಂಗ್ ಡಿಸಿಗೆ ಮನವಿ

Rashmi Kasaragodu
Updated On : 24 May 2013, 11:37 am


ಕನ್ನಡಪ್ರಭ ವಾರ್ತೆ   ಗುಲ್ಬರ್ಗ   ಮೇ 23
ಜೇವರ್ಗಿ ತಾಲೂಕಿನ ಹಲವು ಹಳ್ಳಿಗಳಲ್ಲಿ, ಕೆಲವು ಹರಿಜನ ಓಣಿಗಳಲ್ಲಿ, ತಾಂಡಾಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ತಲೆದೋರಿದ್ದು, ತಕ್ಷಣ ನೀರು ಪೂರೈಕೆ ಮತ್ತು ಸರಬರಾಜಿಗೆ ಕ್ರಮಕೈಗೊಳ್ಳಬೇಕು ಎಂದು ಜೇವರ್ಗಿ ನೂತನ ಶಾಸಕ ಡಾ. ಅಜಯಸಿಂಗ್ ಅವರು ಜಿಲ್ಲಾಧಿಕಾರಿ ಪ್ರಸನ್ನಕುಮಾರ ಅವರಿಗೆ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್, ತಾಲೂಕಿನ ಮುಖಂಡರಾದ ಬಸವಣಪ್ಪ ಗೌನಳ್ಳಿ, ಶಾಂತಗೌಡ ದುಮ್ಮದ್ರಿ, ಬಸವಲಿಂಗಪ್ಪ ವಸ್ತಾರಿ ಸೇರಿದಂತೆ ಹಲವರ ನಿಯೋಗದೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಬೆಳಗ್ಗೆ ತೆರಳಿದ ಶಾಸಕ ಡಾ. ಅಜಯಸಿಂಗ್ ಅವರು ಜೇವರ್ಗಿ ವ್ಯಾಪ್ತಿಯ ಹಳ್ಳಿಗಳಲ್ಲಿ ತಲೆದೋರಿರುವ ನೀರಿನ ಸಮಸ್ಯೆ ಕುರಿತು ಚರ್ಚಿಸಿದರು.
ತುರ್ತು ಸಭೆಗೆ ಆದೇಶ ನೀಡುವೆ: ತಾಲೂಕಿನ ಆಲೂರ, ಬಳಬಟ್ಟಿ, ಬಿಳವಾರ, ಅಂಬರಖೇಡ ಗ್ರಾಪಂಗಳ ವ್ಯಾಪ್ತಿಯ ಹಳ್ಳಿಗಳು, ಕೋನಹಿಪ್ಪರ್ಗಾ, ನರಿಬೋಳ, ರಾಜವಾಡ, ಕಾಚಾಪುರ, ಮಾರಡಗಿ, ನೇರಡಗಿ, ಸಾತಖೇಡ, ಮಂದರವಾಡ, ನೆಲೋಗಿ ಹರಿಜನ ಓಣಿ, ಆಲೂರ ಹೊಸ ಬಡಾವಣೆ ಇನ್ನಿತರ ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವವಿದ್ದು ತಕ್ಷಣ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಶಾಸಕರ ನೇತೃತ್ವದ ಟಾಸ್ಕ್ಪೋರ್ಸ್ನ ತುರ್ತು ಸಭೆ ಕರೆದು ತಕ್ಷಣ ಕ್ರಮಕ್ಕೆ ಆದೇಶಿಸಲಾಗುವುದು ಎಂದರು.
ನೀರು ಪೂರೈಕೆಗೆ ವ್ಯವಸ್ಥೆ: ಈ ಸಂಬಂಧ ಜೇವರ್ಗಿ ತಹಸೀಲ್ದಾರ್ ಹಾಗೂ ಎಕ್ಸಿಕ್ಯುಟೀವ್ ಎಂಜಿನಿಯರ್ ಅವರಿಗೆ ದೂರವಾಣಿ ಕರೆ ಮಾಡಿದ ಜಿಲ್ಲಾಧಿಕಾರಿ ಅವರು, ನೀರಿನ ಸಂಪನ್ಮೂಲ ಇರುವ ಅಂಬರಖೇಡ, ಬಳಬಟ್ಟಿ, ಬಿಳವಾರ ಗ್ರಾಮಗಳಿಂದ ಸುತ್ತಲಿನ ತಲಾ 6-7 ಗ್ರಾಮಗಳಿಗೆ ತಕ್ಷಣವೇ ನೀರು ಸರಬರಾಜಿಗೆ ವಾಹನ ವ್ಯವಸ್ಥೆ ಮಾಡಲು ಆದೇಶಿಸಿದರು. ಬೆಳಗ್ಗೆಯ ಸಮಯದಲ್ಲಿ ಮಾತ್ರ ನೀರಿನ ಪೂರೈಕೆಯಾಗುವಂತೆ ಹಾಗೂ ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಜನಿವಾರ ಗ್ರಾಮದ ಪಕ್ಕದ ನದಿಯಲ್ಲಿ ನೀರು ಕುಡಿಯಲು ಹೋದ ಇಬ್ಬರು ಬಾಲಕರು ಸಾವಿಗೀಡಾಗಿದ್ದು, ತಕ್ಷಣ ಪರಿಹಾರ ಘೋಷಿಸಬೇಕು. ರಾಜಮಾಳದಲ್ಲಿ ಸಿಡಿಲಿಗೆ ಒಬ್ಬ ವ್ಯಕ್ತಿ ಬಲಿಯಾಗಿದ್ದು, ಮನವಿ ಸಲ್ಲಿಸಿ 2 ವಾರಗಳಾದರೂ ತಹಸೀಲ್ದಾರ್ ಪರಿಹಾರ ವಿತರಿಸಿಲ್ಲ ಎಂದು ಅಜಯಸಿಂಗ್ ದೂರಿದರು.
ತಾಲೂಕು ಪ್ರಮುಖರಾದ ಯಶ್ವಂತ ನರಿಬೋಳ, ಖಾಸಿಂ ಪಟೇಲ್, ಸಂಗಮೇಶ ಕೋಂಬಿನ್, ತಮ್ಮಣ್ಣ ಭಾಗೇವಾಡಿ, ಶಾಂತಪ್ಪ ಕೂಡ್ಲಿಗಿ ಸೇರಿದಂತೆ ನೂರಾರು ಜನ ಜಮಾಯಿಸಿ ತಮ್ಮ ಗ್ರಾಮಗಳ ನೀರಿನ ಸಮಸ್ಯೆಗಳನ್ನು ಡಿಸಿ ಅವರಿಗೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement