ಮೂಲ ಸೌಲಭ್ಯಗಳಿಂದ ವಂಚಿತ
ಕನ್ನಡಪ್ರಭ ವಾರ್ತೆ ಚಿಂಚೋಳಿ ಮೇ 23
ಚಿಂಚೋಳಿ ತಾಲೂಕಿನ ಅರಣ್ಯಪ್ರದೇಶದಲ್ಲಿರುವ ಕುಂಚಾವರಂ ವ್ಯಾಪ್ತಿಯಲ್ಲಿ ಬರುವ ಗಡಿ ಅಂಚಿನಲ್ಲಿರುವ ಗ್ರಾಮಗಳು ಸರ್ಕಾರದ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿವೆ.
ಚಿಂಚೋಳಿ ತಾಲೂಕು ಕೇಂದ್ರ ಸ್ಥಾನದಿಂದ 40 ಕಿಮೀ ದೂರದಲ್ಲಿರುವ ಕುಂಚಾವರಂ ವಲಯದಲ್ಲಿ ಬರುವ ವೆಂಕಟಾಪುರ ಗ್ರಾಮ ಪಂಚಾಯತಿ ಆಧೀನದಲ್ಲಿ ಸಂಗಾಪುರ, ಪೆದ್ದಾತಾಂಡಾ, ಧರ್ಮಾಸಾಗರ ಮೋಟಿಮೋಕ, ಗೋಪುನಾಯಕ ತಾಂಡಾ, ವಂಟಿಚಿಂತಾ, ವಂಟಿಗುಡುಸಿ ತಾಂಡಾ, ಸೇರಿಭಿಕನಳ್ಳಿ, ಅಂತಾವರಂ, ಲಿಂಗಾನಗರ, ಕುಂಚಾವರಂ ಗ್ರಾಪಂದಲ್ಲಿ ಪೋಚಾವರಂ, ಶಿವರಾಮಪುರ, ಬೋನಸಪುರ, ಶಿವರೆಡ್ಡಿಪಳ್ಳಿ, ಮಗದಂಪರ, ಲಚಮಾಸಾಗರ ಒಳಗೊಂಡಿವೆ. ಶಾದೀಪುರ ಗ್ರಾಪಂನಲ್ಲಿ ಜಿಲವರ್ಷ, ಜವಾಹರ ನಗರ, ಭಿಕ್ಕುನಾಯಕ ತಾಂಡಾ, ಚಾಪಲಾನಾಯಕ ತಾಂಡಾ, ಸೇವು ನಾಯಕ ತಾಂಡಾ, ಚಂದು ನಾಯಕ ತಾಂಡಾ ಚಿಕ್ಕಲಿಂಗದಳ್ಳಿ ಗ್ರಾಮಗಳು ಮೂಲ ಸೌಲಭ್ಯಗಳಿಂದ ವಂಚಿತಗೊಂಡಿವೆ.
ಆಂಧ್ರಕ್ಕೆ ಅತೀ ಹತ್ತಿರ: ಆಂಧ್ರ ಗಡಿಯಲ್ಲಿ ಬರುವ ವೆಂಕಟಾಪುರ, ಶಿವರಾಮಪುರ, ಸಂಗಾಪುರ ತಾಂಡಾ, ಮಗದಂಪುರ, ಬೋನಸಪುರ, ಲಿಂಗಾನಗರ, ಪೋಚಾವರಂ, ಶಿವರೆಡ್ಡಿಪಳ್ಳಿ ಗ್ರಾಮಗಳು ಆಂಧ್ರಕ್ಕೆ ಅತೀ ಹತ್ತಿರದಲ್ಲಿವೆ.
ಕುಂಚಾವರಂ ಗಡಿ ಪ್ರದೇಶದಲ್ಲಿ 17 ತಾಂಡಾಗಳು, 11 ಗ್ರಾಮಗಳಿದ್ದು ಒಟ್ಟು 25,361 ಜನಸಂಖ್ಯೆ ಹೊಂದಿದ್ದು ಒಟ್ಟು 4, 842 ಮನೆಗಳನ್ನೊಳಗೊಂಡಿದೆ. ಅಂಗನವಾಡಿ ಕೇಂದ್ರಗಳು-31, ತೆಲಗು ಶಾಲೆಗಳು- 9, ಕನ್ನಡ ಮಾಧ್ಯಮ ಶಾಲೆಗಳು 31, ಉರ್ದು- 2 ಹಾಗೂ ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರವನ್ನು ಹೊಂದಿದೆ.
ಬಸ್ ಸೌಕರ್ಯವಿಲ್ಲ: ಸೇರಿ ಭಿಕನಳ್ಳಿ ತಾಂಡಾಕ್ಕೆ ಇನ್ನು ಸಹ ವಿದ್ಯುತ್ ಸೌಲಭ್ಯ ಇರುವುದಿಲ್ಲ ಹಾಗೂ ಸಂಗಾಪುರ ತಾಂಡಾ, ಮಗದಂಪುರ, ಶಿವರಾಮಪುರ, ಶಿವರೆಡ್ಡಿ, ಪೋಚಾವರಂ ಗ್ರಾಮಗಳಿಗೆ ಬಸ್ಸಿನ ಸೌಕರ್ಯವಿಲ್ಲ. ಇಲ್ಲಿನ ಜನರು ಇಂದಿಗೂ ನಡೆದುಕೊಂಡೆ ಬೇರೆ ಗ್ರಾಮಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ.
ಕುಂಚಾವರಂ ಜಿಲ್ಲಾ ಪಂಚಾಯತಿ, ತಾಪಂ ಕ್ಷೇತ್ರವನ್ನು ಹೊಂದಿದೆ. ಇಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಲಕಿಯರಿಗೆ ವಸತಿ ನಿಲಯ ಅವಶ್ಯಕತೆಯಿದೆ. ಹೆಣ್ಣು ಹಸುಗೂಸು ಮಕ್ಕಳ ಮಾರಾಟಕ್ಕೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ಕುಂಚಾವರಂ ಅರಣ್ಯ ಪ್ರದೇಶದಲ್ಲಿರುವ ತಾಂಡಾ ಗ್ರಾಮಗಳಲ್ಲಿರುವ ಬಡವರು ಬಡವರಾಗಿಯೇ, ಶ್ರೀಮಂತರು ಶ್ರೀಮಂತರಾಗಿಯೇ ಇದ್ದಾರೆ. ಆದರೆ ನಿಜವಾದ ಬಡವರಿಗೆ ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ.
ಕರ್ನಾಟಕದಿಂದ ಯಾವುದೇ ಸೌಲಭ್ಯವಿಲ್ಲ: ಕುಂಚಾವರಂ ಜನರು ಹೇಳುವುದೆನೆಂದರೆ ನಮಗೆ ಕರ್ನಾಟಕದಿಂದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಕಾಂಗ್ರೆಸ್ ಪಕ್ಷದ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ 10 ಕೋಟಿ ವಿಶೇಷ ಪ್ಯಾಕೇಜ್ ನೀಡಿದರೂ ಆ ಪ್ಯಾಕೇಜ್ ಹಣ ಎಷ್ಟರ ಮಟ್ಟಿಗೆ ಉಪಯೋಗವಾಗಿದೆ ಎಂಬುದು ಇನ್ನು ತಿಳಿದಿಲ್ಲ. ಸರ್ಕಾರ ಇತ್ತ ಗಮನ ಹರಿಸಬೇಕಾಗಿದೆ.