'ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಖಚಿತ'
ಯಾದಗಿರಿ: ಮುಂಬರುವ 2014ನೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬರುವುದು ಶತಸಿದ್ಧ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಚಿಂತನ ಮಂಥನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಧಾನಸಭೆ ಚುನಾವಣೆ ಕಹಿ ಘಟನೆಗಳನ್ನು ಮರೆತು ಲೋಕಸಭಾ ಚುನಾವಣೆಗಳಿಗೆ ಕಾರ್ಯಕರ್ತರು ಅಣಿಯಾಗಬೇಕು ಎಂದು ಕಿವಿಮಾತು ಹೇಳಿದರು.
ಆತ್ಮವಿಶ್ವಾಸ ಇರಲಿ: ಪಕ್ಷ ತಳಮಟ್ಟದಲ್ಲಿ ಕಾರ್ಯಕರ್ತರ ಪಡೆ ಹೊಂದಿದ್ದು, ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಿದಲ್ಲಿ ಗೆಲವು ಕಟ್ಟಿಟ್ಟ ಬುತ್ತಿ ಎಂದರು. ಸದ್ಯ ನಡೆದ ಎಲ್ಲ ಸಮೀಕ್ಷೆಗಳಲ್ಲಿ ಕೇಂದ್ರದಲ್ಲಿ ಎನ್ಡಿಎಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಬರಲಿದೆ. ಇದಕ್ಕಾಗಿ ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕು ಎಂದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ರಘುನಾಥ ಮಲ್ಕಾಪುರೆ ಮಾತನಾಡಿ, ಮತಗಳ ವಿಭಜನೆಯಿಂದಲೇ ಪಕ್ಷದ ಸೋಲಿಗೆ ಕಾರಣವಾಯಿತು ಎಂದು ವಿಶ್ಲೇಷಿಸಿದರು. ಜಿಲ್ಲಾಧ್ಯಕ್ಷ ವೀರನಗೌಡ ಮಲ್ಲಾಬಾದಿ, ಚಂದ್ರಶೇಖರಗೌಡ ಮಾಗನೂರ, ಜಿಪಂ ಸದಸ್ಯ ದೇವರಾಜ ನಾಯಕ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೇವಿಂದ್ರನಾಥ ನಾದ, ನೀಲಕಂಠರಾಯ ಯಲ್ಹೇರಿ, ಮಲ್ಲಿಕಾರ್ಜುನ ಗುಳೇದ, ಯಲ್ಲಯ್ಯ ನಾಯಕ, ಮಹೇಂದ್ರಗೌಡ ಅಳ್ಳೊಳ್ಳಿ, ರಾಮವಿಲಾಸ ಭಟ್ಟಡ, ವೇಣುಗೋಪಾಲ, ಮಲ್ಲೇಶ ನಾಗರಾಳ ಸುರಪುರ, ದೇವದಾಸ, ಮಲ್ಲೇಶಪ್ಪ ಬೇಲಿ, ತ್ರಿಶೂಲ ಹವಲ್ದಾರ್, ನಿಂಗಣ್ಣ ಸಾಹು ಖಾನಾಪೂರ, ಸುನೀಲ್ ಗಾಂಧಿ ಇನ್ನಿತರರು ಪಾಲ್ಗೊಂಡಿದ್ದರು.ಚನ್ನು ಮಾಳಿಕೇರಿ ನಿರೂಪಿಸಿ ನ್ಯಾಯವಾದಿ ಚನ್ನಯ್ಯ ಮಾಳಿಕೇರಿ ಸ್ವಾಗತಿಸಿ ವಂದಿಸಿದರು.