ಜನ ಮನ ಸೆಳೆದ ಸೈಕಲ್ ಸಾಹಸ ಪ್ರದರ್ಶನ
ಗುಲ್ಬರ್ಗ: ನಗರದ ಬಸವೇಶ್ವರ ಆಸ್ಪತ್ರೆಯ ಎದುರಿನ ವಿದ್ಯಾನಗರ ವೆಲ್ಫೇರ್ ಸೊಸೈಟಿ ಆಶ್ರಯದಲ್ಲಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗುರುವಾರ ನಡೆದ ಕಲಾವಿದರ ಸೈಕಲ್ ಸಾಹಸ ಪ್ರದರ್ಶನ ಜನರ ಗಮನ ಸೆಳೆಯಿತು.
ಹಲ್ಲಿನಿಂದಲೇ ಸೈಕಲ್ ಮೇಲಕ್ಕೆ ಎತ್ತುವುದು, ನೀರು ತುಂಬಿದ ಕೊಡಗಳನ್ನು ಹಲ್ಲಿನಿಂದ ಎತ್ತಿ ಸೈಕಲ್ ಓಡಿಸುವುದು, ಕೈಗಳಿಂದಲೇ ಮುಂದಿನ ಚಕ್ರ ತಿರುಗಿಸುತ್ತ ಸೈಕಲ್ ಓಡಿಸುವುದು, ಪೈಡಲ್ ಸಹಾಯದಿಂದಲೇ ಸೈಕಲ್ ರೌಂಡ್ ಹಾಕುವುದು ಹಾಗೂ ಐದು ಮಕ್ಕಳೊಂದಿಗೆ ಸೈಕಲ್ ಸವಾರಿ ಮಾಡಿ ಸಾಹಸ ಪ್ರದರ್ಶಿಸುವ ಮೂಲಕ ಕಲಾವಿದ ಎ. ಮನೋಹರ ಆಚಾರ್ಯ ನೆರೆದಿದ್ದ ನೂರಾರು ಜನರ ಗಮನ ಸೆಳೆದರು.
ಕಲಾವಿದ ಮನೋಹರ ಬಿಕಾಂ ಪದವೀಧರರಾಗಿದ್ದು, ಮಕ್ಕಳು ಡಿಪ್ಲೋಮಾ, ಎಂಎಸ್ಸಿ ಹಾಗೂ ಸಿಎ ಕೋರ್ಸುಗಳಲ್ಲಿ ಅಭ್ಯಾಸ ಮಾಡುವುದರ ಜತೆಗೆ ಕಲೆ, ಸಂಸ್ಕೃತಿ ಉಳಿಸಿಕೊಂಡು ಬರುತ್ತಿದ್ದಾರೆ.
ಸೊಸೈಟಿ ಅಧ್ಯಕ್ಷ ಬಿ. ಎನ್. ಪುಣ್ಯಶೆಟ್ಟಿ ಸಾಹಸ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಮೇಶ ಶೆಟ್ಟಿ, ಮಲ್ಲಿನಾಥ ದೇಶಮುಖ, ಅಣ್ಣಾರಾವ ಹೆಬ್ಬಾಳ, ಶಿವರಾಜ ಅಂಡಗಿ ಇತರರು ಉಪಸ್ಥಿತರಿದ್ದರು. ಪ್ರಿಯಾ ಭರತನಾಟ್ಯ ಪ್ರದರ್ಶಿಸಿದರು. ನೂರಾರು ಜನರು ಉಪಸ್ಥಿತರಿದ್ದರು.
--
ಕುಡಿದ ಮತ್ತಿನಲ್ಲಿ ಪತ್ನಿ ಕೊಲೆ
ಗುಲ್ಬರ್ಗ: ಪತಿಯೊಬ್ಬ ಪತ್ನಿಯ ಕುತ್ತಿಗೆಗೆ ನೂಲಿನಿಂದ ಬಿಗಿದು ಕೊಲೆ ಮಾಡಿ ಮನೆಯ ಅಡ್ಡಿ ಕಟ್ಟಿಗೆಗೆ ತೂಗು ಹಾಕಿ ಪರಾರಿಯಾದ ಘಟನೆ ಜೇವರ್ಗಿ ತಾಲೂಕಿನ ಜೆರಟಗಿ ಗ್ರಾಮದ ಯುಕೆಪಿ ಕ್ಯಾಂಪಿನ ಹತ್ತಿರ ಗುರುವಾರ ನಡೆದಿದೆ. ರಾಮಕಲಾ ಗಂಡ ಧನಸಿಂಗ್ ಎಂಬ ಮಹಿಳೆ ಮೃತಪಟ್ಟಿದ್ದಾಳೆ. ಗಂಡ ಧನಸಿಂಗ್ ಮನೆಗೆ ಕುಡಿದು ಬಂದು ಹೆಂಡತಿಯೊಂದಿಗೆ ಜಗಳ ತೆಗೆದು ಆಕೆಯ ಕುತ್ತಿಗೆಗೆ ನೂಲಿನಿಂದ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಂಟಂ ಪಲ್ಟಿ: ಮಹಿಳೆ ಸಾವು
ಗುಲ್ಬರ್ಗ: ನಿಂಬರ್ಗಾ ತಾಂಡಾದ ಸಮೀಪ ಟಂಟಂಮೊಂದು ಉರುಳಿ ಬಿದ್ದ ಪರಿಣಾಮ ಮಹಿಳೆಯೊಬ್ಬಳು ಮೃತಪಟ್ಟಿದ್ದು, ನಾಲ್ಕೈದು ಜನ ಗಾಯಗೊಂಡ ಘಟನೆ ಗುರುವಾರ ನಡೆದಿದೆ. ಆಳಂದ ತಾಲೂಕಿನ ಕಡಗಂಚಿ ಗ್ರಾಮದ ವಿಮಲಾಬಾಯಿ ಗಂಡ ಶಿವಾನಂದ ಜಮಾದಾರ ಎಂಬ ಮಹಿಳೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವಿಗೀಡಾಗಿದ್ದಾಳೆ. ನಾಲ್ಕೈದು ಜನ ಗಾಯಗೊಂಡಿದ್ದಾರೆ. ದೇವರ ದರ್ಶನಕ್ಕೆಂದು ಟಂಟಂನಲ್ಲಿ ಹೋಗುತ್ತಿದ್ದಾಗ ನಿಂಬರ್ಗಾ ತಾಂಡಾದ ಹತ್ತಿರ ಟಂಟಂ ಚಾಲಕನ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ.
ಪ್ಲಾಸ್ಟಿಕ್ ಪೈಪ್ನಿಂದ ಹೊಡೆದು ವ್ಯಕ್ತಿ ಕೊಲೆ
ಗುಲ್ಬರ್ಗ: ಪ್ಲಾಸ್ಟಿಕ್ ಪೈಪ್ನಿಂದ ಹೊಡೆದು ವ್ಯಕ್ತಿಯೊಬ್ಬನಿಗೆ ಕೊಲೆ ಮಾಡಿದ ಘಟನೆ ವಾಡಿಯ ಬಸಪ್ಪನ ಖಣಿಯಲ್ಲಿ ನಡೆದಿದೆ. ಲಚ್ಚಮಯ್ಯ ಎಂಬಾತ ಸಾವಿಗೀಡಾಗಿದ್ದಾನೆ. ಲಚ್ಚಮಯ್ಯ ತನ್ನ ಗೆಳೆಯರೊಂದಿಗೆ ಸಮಾರಂಭಕ್ಕೆ ಹೋಗಿ ಮರಳಿ ವಾಡಿಯ ಖಣಿ ಬಳಿಯಲ್ಲಿರುವ ಹನುಮಾನ ದೇವಸ್ಥಾನದ ಹತ್ತಿರ ಕುಳಿತುಕೊಂಡಾಗ ಹಣಮಂತ ಬಂಡಿ ಒಡ್ಡರ ಎಂಬಾತ ಪ್ಲಾಸ್ಟಿಕ್ ಪೈಪ್ ಹಿಡಿದುಕೊಂಡು ಬಂದು ಅವಾಚ್ಯವಾಗಿ ಬೈದು ಪೈಪ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರ್ಯಾಕ್ಟರ್ ಪಲ್ಟಿ: ವ್ಯಕ್ತಿ ಸಾವು
ಚಿಂಚೋಳಿ: ತಾಲೂಕಿನ ರಟಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮೋಘಾ ಗ್ರಾಮದ ಹತ್ತಿರ ಟ್ರ್ಯಾಕ್ಟರ್ ಪಲ್ಟಿಯಾಗಿ ಒಬ್ಬ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ. ಬಸವರಾಜ ತಂದೆ ಗುಂಡಪ್ಪ ಚಂದನಕೇರಾ (38) ಎಂಬಾತನೇ ಮೃತಪಟ್ಟಿದ್ದಾನೆ. ಚಿಂಚೋಳಿಯಿಂದ ಟ್ರ್ಯಾಕ್ಟರ್ನಲ್ಲಿ ಕಲ್ಲು ಮತ್ತು ಪರಸಿ ತುಂಬಿಕೊಂಡು ಚಂದನಕೇರಾ ಗ್ರಾಮಕ್ಕೆ ಕೊಂಡ್ಯೊಯುತ್ತಿದ್ದಾಗ ಮೋಘಾ ಗ್ರಾಮದ ಸೇತುವೆ ಹತ್ತಿರ ಗುರುವಾರ ರಾತ್ರಿ ಪಲ್ಟಿಯಾಗಿದ್ದು, ಕಲ್ಲು ಮತ್ತು ಪರಸಿ ಮೈ ಮೇಲೆ ಬಿದ್ದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.