ದುಬಾರಿ ಮಿನರಲ್ ವಾಟರ್: ಆಕ್ಷೇಪ
ಬೀದರ್: ಬೀದರ್ನಲ್ಲಿ ದಿನೇ ದಿನೇ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಮಿನರಲ್ ವಾಟರ್ ಪ್ರತಿ ಕ್ಯಾನಗಳಿಗೆ ದುಬಾರಿ ಬೆಲೆ ಪಡೆಯುತ್ತಿರುವುದಕ್ಕೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಮಚಂದ್ರ ಗಂದಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೇಸಿಗೆ ಬಿಸಿಲಿನಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಬಾವಿಗಳು ಬತ್ತಿ ಹೋಗಿವೆ. ಕುಡಿಯುವ ನೀರಿಗೆ ಹಾಹಾಕಾರ ಇರುವುದರಿಂದ ಶ್ರೀಮಂತರಲ್ಲದೆ ಮಧ್ಯಮ ವರ್ಗದವರು ಸಹ ಹಣ ನೀಡಿ ಮಿನರಲ್ ವಾಟರ್ ಖರೀದಿಸುತ್ತಿದ್ದಾರೆ.
ಮದುವೆ ಮುಂತಾದ ಸಮಾರಂಭಗಳಲ್ಲೂ ಇದೇ ನೀರಿನ್ನು ಖರೀದಿಸಿ ಬಳಸುತ್ತಿದ್ದಾರೆ. ಆದರೆ ಕೆಲ ಮಿನರಲ್ ವಾಟರ್ ಘಟಕಗಳು ಒಂದು ತಿಂಗಳಲ್ಲೇ ನೀರಿನ ಬೆಲೆಯನ್ನು ದುಪ್ಪಟ್ಟು ಮಾಡಿವೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಒಂದು ಕ್ಯಾನ್ಗೆ 25 ರಿಂದ 30 ರು. ಪಡೆಯಲಾಗುತ್ತಿತ್ತು. ಆದರೆ ಈಗ 50 ರು. ಪಡೆಯಲಾಗುತ್ತಿದೆ. ವಿದ್ಯುತ್, ಸಾರಿಗೆ ವೆಚ್ಚಗಳು ಜಾಸ್ತಿಯಾಗದಿದ್ದರೂ ಕೂಡ ಮಿನರಲ್ ವಾಟರ್ನ ಬೆಲೆ ಹೆಚ್ಚಳ ಮಾಡಿರುವುದು ಸರಿಯಲ್ಲ ಎಂದಿದ್ದಾರೆ.
ಕೃತಕ ಅಭಾವ: ಕೆಲ ಘಟಕಗಳು ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಳ್ಳಲು ಕೃತಕ ಅಭಾವದ ಸ್ಥಿತಿ ನಿರ್ಮಾಣ ಮಾಡಿ ಅದನ್ನು ಬೆಲೆ ಹೆಚ್ಚಳಕ್ಕೆ ಬಳಸಿಕೊಳ್ಳುತ್ತಿವೆ ಎಂದು ತಿಳಿಸಿದ್ದಾರೆ.
ನೀರು ಮನುಷ್ಯನ ಪ್ರಮುಖ ಅವಶ್ಯಕತೆಯಾಗಿದ್ದರಿಂದ ಇದರ ಬೆಲೆ ಮೇಲೆ ನಿಯಂತ್ರಣ ಇರಬೇಕು.
ಕೂಡಲೇ ಹೆಚ್ಚಿಸಿರುವ ಮಿನರಲ್ ವಾಟರ್ ದರವನ್ನು ಕಡಿಮೆ ಮಾಡಬೇಕು ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಬೀದರ್ನಲ್ಲಿ ಅನೇಕ ಮಿನರಲ್ ವಾಟರ್ ಘಟಕಗಳು ಅನಧಿಕೃತವಾಗಿ ನಡೆಯುತ್ತಿವೆ. ಇವುಗಳ ವಿರುದ್ಧವು ಕ್ರಮ ಜರುಗಿಸಬೇಕೆಂದು ಗಂದಗೆ ಆಗ್ರಹಿಸಿದ್ದಾರೆ.