ಮರು ಎಣಿಕೆ: ರಾಜುಗೆ 3 ಮತಗಳ ಜಯ
ಕ.ಪ್ರ.ವಾರ್ತೆ, ಚಿಂಚೋಳಿ, ಮೇ 24
ತಾಲೂಕಿನ ವೆಂಕಟಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ವೆಂಕಟಾಪುರ ಗ್ರಾಮದ ಬಿಸಿ(ಎ) ಮಹಿಳಾ ಸ್ಥಾನಕ್ಕೆ ನಡೆದ ಮರು ಮತ ಎಣಿಕೆಯಲ್ಲಿ ಕಾಂಗ್ರೆಸ್ ಬೆಂಬಲಿತರಾದ ಮಂಜುಳಾ ಗಂಡ ರಾಜು 3 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ ಎಂದು ತಹಸೀಲ್ದಾರ್ ಮೋಹನ ಜೋಶಿ ಘೋಷಿಸಿದರು.
ವೆಂಕಟಾಪುರ ಗ್ರಾಮ ಪಂಚಾಯತಿಗೆ ಕಳೆದ 17ರಂದು ನಡೆದ ಚುನಾವಣೆಯಲ್ಲಿ ಸಂಗಮ್ಮ ಗಂಡ ಸಾಯಣ್ಣ ಇವರು 386 ಮತಗಳು ಪಡೆದುಕೊಂಡು ಜಯ ಗಳಿಸಿದ್ದರು. ಮಂಜುಳಾ ಗಂಡ ರಾಜು ಇವರು 385 ಮತಗಳು ಪಡೆದುಕೊಂಡು, ಸಮರ್ಪಕ ಎಣಿಕೆ ಆಗಿಲ್ಲ ಎಂದು ಆಕ್ಷೇಪಿಸಿ ಚಿಂಚೋಳಿ ಸಿವಿಲ್ ನ್ಯಾಯಾಲಯಕ್ಕೆ ಮರು ಮತ ಎಣಿಕೆ ಸಲುವಾಗಿ ಅರ್ಜಿ ಸಲ್ಲಿಸಿದ್ದರು.
ಚಿಂಚೋಳಿ ಜೆಎಂಎಫ್ಸಿ ಮತ್ತು ಸಿವಿಲ್ ನ್ಯಾಯಾಲಯ ಮೇ 20 ಮತ್ತು 27.4.2013ರ ಆದೇಶದಂತೆ ಶುಕ್ರವಾರ ತಹಸೀಲ್ ಕಾರ್ಯಾಲಯದ ಸಭಾಂಗಣದಲ್ಲಿ ವೆಂಕಟಾಪುರ ಗ್ರಾಮ ಪಂಚಾಯತಿ ಬಿಸಿಎ (ಮಹಿಳಾ) ಸ್ಥಾನದ ಮರು ಮತ ಎಣಿಕೆ ನಡೆಯಿತು.
ಈ ಎಣಿಕೆ ಪ್ರಕ್ರಿಯೆಯಲ್ಲಿ ಮಂಜುಳಾ ಗಂಡ ರಾಜು 385 ಮತಗಳು ಪಡೆದು 3 ಮತಗಳ ಅಂತರದಿಂದ ಗೆಲವು ಸಾಧಿಸಿದರು. ಸಂಗಮ್ಮ ಗಂಡ ಸಾಯಣ್ಣ 382 ಮತಗಳು ಪಡೆದು ಪರಾಭವಗೊಂಡರು. ಅಡಿವೆಮ್ಮ ಗಂಡ ನಾರಾಯಣ 98 ಮತಗಳು ಪಡೆದುಕೊಂಡರು.
ಚುನಾವಣೆಯಲ್ಲಿ ಮಂಜುಳಾ ಗಂಡ ರಾಜು 385 ಮತಗಳು ಪಡೆದುಕೊಂಡು ಜಯಶಾಲಿಯಾಗಿದ್ದಾರೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ. ಮರುಮತ ಏಣಿಕೆಯ ಸಂದರ್ಭದಲ್ಲಿ ಚಿಂಚೋಳಿ ಸಿಪಿಐ ನಿರಂಜನ ಪಾಟೀಲ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುರೇಶ ಬೆಂಡಗುಂಬಳ ವ್ಯಾಪಕ ಬಂದೋಬಸ್ತ್ ವ್ಯವಸ್ಥೆಗೊಳಿಸಿದರು.