'ಆದರ್ಶ ಶಿಕ್ಷಕ' ಪ್ರದಾನ
ಸೇಡಂ: ತಾಲೂಕಿನ ಬೀರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಶಿವರಾಯ ಭೋವಿಯವರಿಗೆ ಗೋಕಾಕ ತಾಲೂಕಿನ ಮೂಡಲಗಿಯ ಚೈತನ್ಯ ಗ್ರೂಪ್ ಅವರು ನೀಡುವ ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ರಾಜ್ಯಮಟ್ಟದ ಶಿಕ್ಷಕರ ಸಮಾವೇಶದಲ್ಲಿ ಇತ್ತೀಚೆಗೆ ಪ್ರದಾನ ಮಾಡಲಾಯಿತು.
'ಅನುಮತಿ ಇಲ್ಲದ ಶಾಲೆಗಳಲ್ಲಿ ದಾಖಲಾತಿ ಬೇಡ'
ಚಿತ್ತಾಪುರ: ತಾಲೂಕಿನಲ್ಲಿ ಕೆಲವು ಶಾಲೆಗಳು ಇಲಾಖೆಯಿಂದ ಅನುಮತಿ ಪಡೆಯದೇ ಶಾಲೆಗಳನ್ನು ನಡೆಸುತ್ತಿದ್ದು, ಅಂತಹ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಾಲಾತಿ ಮಾಡಬೇಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚವ್ವಾಣ ಶೆಟ್ಟಿ ತಿಳಿಸಿದ್ದಾರೆ. 2013-14ನೇ ಸಾಲಿನಲ್ಲಿ ತಾಲೂಕಿನ ಅಂಬಾ ಭವಾನಿ ಕಿರಿಯ ಪ್ರಾಥಮಿಕ ಶಾಲೆ ಲಕ್ಷ್ಮಿಪುರವಾಡಿ ವಾಡಿ(ಜಂ), ಮದರ ತೆರೆಸಾ ಕಿ.ಪಾ.ಶಾಲೆ ವಾಡಿ(ಜಂ), ಎಸ್ಇಎಸ್ ಪ್ರಾ.ಶಾಲೆ ಅಪ್ಪರ ಮಡ್ಡಿ ಶಹಾಬಾದ್, ಸರಸ್ವತಿ ಕಿ.ಪ್ರಾ.ಶಾಲೆ ಸ್ಟೇಶನ್ ಚಿತ್ತಾಪುರ, ಜ್ಞಾನ ಸಾಗರ ಕಿ.ಪ್ರಾ.ಶಾಲೆ ಕಾಳಗಿ ಸೇರಿದಂತೆ 5 ಶಾಲೆಗಳು ಮಾನ್ಯತೆ ಪಡೆಯದೇ ಇರುವುದರಿಂದ ಸದರಿ ಶಾಲೆಗಳನ್ನು ಮುಚ್ಚಲು ಕ್ರಮ ಕೈಗೋಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ತಮ್ಮ ಮಕ್ಕಳನ್ನು ಶಾಲೆಗಳಲ್ಲಿ ಪ್ರವೇಶ ಪಡೆಯುವ ಮೊದಲು ಆ ಶಾಲೆಯು ಪರವಾನಿಗೆ ಹಾಗೂ ಮಾದ್ಯಮದ ಬಗ್ಗೆ ಅನುಮತಿ ಪಡೆದಿರುವುದೇ ಎಂದು ಪರಿಶೀಲಿಸಿ ದಾಖಲಿಸಲು ತಿಳಿಸಲಾಗಿದೆ.
ವಗ್ಗಿಗೆ ಶಿಕ್ಷಣ ಶಿಲ್ಪಿ ಪ್ರಶಸ್ತಿ ಪ್ರದಾನ
ಸೇಡಂ: ಬೆಂಗಳೂರಿನ ಶಿಕ್ಷಣ ಸೌರಭ ಪತ್ರಿಕೆಯವರು ಕೊಡಮಾಡುವ ರಾಜ್ಯ ಮಟ್ಟದ ಶಿಕ್ಷಣ ಶಿಲ್ಪಿ ಪ್ರಶಸ್ತಿಯನ್ನು ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ಎ.ಎಸ್. ವಗ್ಗಿಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ನಡೆದ ರಾಜ್ಯ ಮಟ್ಟದ 2013ನೇ ಸಾಲಿನ ಶೈಕ್ಷಣಿಕ ಸಮಾವೇಶದಲ್ಲಿ ಚೈತನ್ಯ ಗ್ರೂಪ್ಸ್ ಸಂಸ್ಥಾಪಕ ಸಿದ್ದಣ್ಣ ಹೊರಟ್ಟಿಯವರು ವಗ್ಗಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ಶಿಕ್ಷಕರ ಪ್ರತಿಭಾ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ಮಹೇಶ, ಕಾಶಿನಾಥ ಹೊಟ್ಟಿ ಇತರರು ಈ ಸಂದರ್ಭದಲ್ಲಿದ್ದರು. ತಾಲೂಕಿನಲ್ಲಿ ವಗ್ಗಿಯವರು ಮಾಡಿರುವ ಯೋಗ ಕ್ರಾಂತಿಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಶಿಕ್ಷಣ ಸೌರಭ ಪತ್ರಿಕೆಯ ಸಂಪಾದಕ ಪಿ. ಸೋಮೇಶ ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ಎಂ.ಜಿ. ಬಿರಾದಾರ, ಶಿಕ್ಷಕರ ಪ್ರತಿಭಾ ಪರಿಷತ್ತಿನ ಜಿಲ್ಲಾಧ್ಯಕ್ಷ ಗುರುಪಾದ ಕೊಗನೂರ, ಜೇವರ್ಗಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಎಂ. ಚೌಧರಿ, ಸೇಡಂ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತ ರೆಡ್ಡಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಖಜಾಂಚಿ ಚನ್ನಬಸಪ್ಪ ಕಲ್ಲೂರ್, ಯೋಗ ಪಟು ಸೋಮನಾಥರೆಡ್ಡಿ ಪುರ್ಮಾ ವಗ್ಗಿ ಅವರನ್ನು ಅಭಿನಂದಿಸಿದ್ದಾರೆ.
ಮುಂಗಡ ಟಿಕೆಟ್ ಕೌಂಟರ್ ಆರಂಭ
ಗುಲ್ಬರ್ಗ: ನಗರದ ಜೇವರ್ಗಿ ಕ್ರಾಸ್ನಲ್ಲಿರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಬಳಿ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡ ಟಿಕೆಟ್ ವಿತರಣೆ ಕೌಂಟರ್ ಆರಂಭಿಸಲಾಗಿದೆ. ಇದೇ ಕೌಂಟರ್ನಲ್ಲಿ ಮಾಸಿಕ ಪಾಸ್ ಮತ್ತು ದೈನಂದಿನ ಪಾಸ್ಗಳನ್ನು ಸಹ ವಿತರಣೆ ಮಾಡಲಾಗುವುದು. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಈ ವ್ಯವಸ್ಥೆಯ ಲಾಭ ಪಡೆಯುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಕೋರಿದ್ದಾರೆ.
30ಕ್ಕೆ ರಸ್ತೆ ಸುರಕ್ಷತಾ ಸಮಿತಿ ಸಭೆ
ಗುಲ್ಬರ್ಗ: ಗುಲ್ಬರ್ಗ ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಭೆ ಮೇ 30ರ ಮಧ್ಯಾಹ್ನ 3.30ಕ್ಕೆ ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಜರುಗಲಿದೆ.
ಜೂ.7ರಂದು ಜಿಪಂ 8ನೇ ಸಾಮಾನ್ಯ ಸಭೆ
ಗುಲ್ಬರ್ಗ: ಜಿಲ್ಲಾ ಪಂಚಾಯಿತಿಯ 8ನೇ ಸಾಮಾನ್ಯ ಸಭೆಯು ಜೂನ್ 7ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯ್ತಿ ಹಳೆ ಸಭಾಂಗಣದಲ್ಲಿ ಜರುಗಲಿದೆ. ಜಿ.ಪಂ. ಅಧ್ಯಕ್ಷ ಶರಣಪ್ಪ ವೀರಶೆಟ್ಟಿ ಪೊಲೀಸ್ ಪಾಟೀಲ್ ಸಭೆಯ ಅಧ್ಯಕ್ಷತೆ ವಹಿಸುವರು.