ಇಂದು ಪೂರ್ವಭಾವಿ ಸಭೆ
ಗುಲ್ಬರ್ಗ: ಮಹಾದೇವಿ ಅಕ್ಕಗಳ 6ನೇ ಸಮ್ಮೇಳನ ಹಮ್ಮಿಕೊಳ್ಳುವ ಕುರಿತು ಪೂರ್ವಭಾವಿ ಸಭೆಯು ಮೇ 26ರಂದು ಸಂಜೆ 6 ಗಂಟೆಗೆ ಜಯನಗರದ ಅನುಭವ ಮಂಟಪದಲ್ಲಿ ಕರೆಯಲಾಗಿದೆ. ಜೂನ್ ಕೊನೆಯ ವಾರದಲ್ಲಿ 6ನೇ ಸಮ್ಮೇಳನ ಆಚರಿಸಲು ನಿರ್ಧರಿಸಲಾಗಿದೆ ಎಂದು ಅಕ್ಕನ ಬಳಗದ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ತಿಳಿಸಿದ್ದಾರೆ. ಈ ಸಮ್ಮೇಳನ ಯಶಸಿಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಪೂರ್ವಭಾವಿಯಾಗಿ ಸಭೆ ಕರೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಮಶಾನ ಭೂಮಿಗೆ ಡಿಸಿಗೆ ಮನವಿ
ಗುಲ್ಬರ್ಗ: ಚಿತ್ತಾಪುರ ತಾಲೂಕಿನ ವಚ್ಚಾ ಗ್ರಾಮದಲ್ಲಿ ಎಸ್ಸಿ ವಡ್ಡರ ಜನರಿಗಾಗಿ ಸ್ಮಶಾನ ಭೂಮಿ ಮಂಜೂರು ಮಾಡಲು ಜಿಲ್ಲಾಧಿಕಾರಿಗೆ ಸಿದ್ದಣ ಜಿ. ಕನ್ನಡಗಿ ಮನವಿ ಮಾಡಿದ್ದಾರೆ. ಈ ಗ್ರಾಮದಲ್ಲಿ ವಡ್ಡರ ಜನಾಂಗದ ಸಾಕಷ್ಟು ಜನರು ವಾಸಿಸುತ್ತಿದ್ದು, ಹೆಚ್ಚಿನ ಜನರಿಗೆ ಸ್ವಂತ ಕೃಷಿ ಭೂಮಿ ಇಲ್ಲದೆ ಬದುಕುತಿದ್ದಾರೆ. ಕೂಲಿ ಹಾಗೂ ಇನ್ನಿತರ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಈ ಜನಾಂಗದ ಯಾವುದೇ ವ್ಯಕ್ತಿ ಮೃತಪಟ್ಟರೆ ಅವರಿಗೆ ಸ್ಮಶಾನ ಭೂಮಿಗೊಸ್ಕರ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಗ್ರಾಮಕ್ಕೆ ಹತ್ತಿರದಲ್ಲಿರುವ ಸರ್ಕಾರಿ ಜಮೀನಿನಲ್ಲಿ ಸ್ಮಶಾನ ಭೂಮಿ ಮಂಜೂರು ಮಾಡಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಪೆಂಟಾರೆಡ್ಡಿ ಸೇವಾದಳಕ್ಕೆ ಆಯ್ಕೆ
ಗುಲ್ಬರ್ಗ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕ ಭೀಮಾಶಂಕರ ವಿ.ಎಚ್ ಅವರ ನಿರ್ದೇಶನದಂತೆ ಪೆಂಟಾರೆಡ್ಡಿ ಅವರನ್ನು ಗುಲ್ಬರ್ಗ ಕಾಂಗ್ರೆಸ್ ಸೇವಾದಳಕ್ಕೆ ಕಾರ್ಯಕಾರಿ ಸದಸ್ಯರಾಗಿ ನೇಮಕ ಮಾಡಲಾಗಿದೆ ಎಂದು ಹಣಮಂತರಾವ ಎಸ್. ಜವಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.