ಕಾರ್ಮಿಕರು ಸೌಲಭ್ಯ ಪಡೆಯಲು ಮುಂದಾಗಬೇಕು: ಶಿವಣ್ಣ
ಕನ್ನಡಪ್ರಭ ವಾರ್ತೆ , ಯಾದಗಿರಿ , ಮೇ 25
ಸಂಘದ ಸೌಲಭ್ಯಗಳನ್ನು ಎಲ್ಲಾ ಕಾರ್ಮಿಕರು ಸರಿಯಾದ ರೀತಿಯಲ್ಲಿ ಇದರ ಯೋಜನೆಗಳು, ಲಾಭಗಳನ್ನು ಪಡೆದುಕೊಳ್ಳಬೇಕೆಂದು ಎಂದು ಕಟ್ಟಡ ಕಟ್ಟುವ ಹಾಗೂ ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ಎನ್. ಶಿವಣ್ಣ ಹೇಳಿದರು.
ಕಟ್ಟಡ ಕಟ್ಟುವ ಹಾಗೂ ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ನಗರದ ಚರ್ಚ್ನಲ್ಲಿ ಆಯೋಜಿಸಿದ್ದ ಕಾಮರ್ಕರ ದಿನಾಚರಣೆಯಲ್ಲಿ ಭಗತ್ಸಿಂಗ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಸೌಲಭ್ಯ ಪಡೆಯಿರಿ: ಕಾರ್ಮಿಕ ಮಂಡಳಿಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ, ಮನೆಯ ಮಗಳ ಮದುವೆಗೆ, ವೃತ್ತಿಪರ ಶಿಕ್ಷಣಕ್ಕೆ, ಕಾರ್ಮಿಕ ಕೆಲಸ ಮಾಡುವಾಗ ಅಪಘಾತಕ್ಕಿಡಾದಾಗ ಯಾವ ರೀತಿಯಾಗಿ ಕಾರ್ಮಿಕ ಮಂಡಳಿಯಿಂದ ಸಿಗುವ ಸೌಲಭ್ಯಗಳನ್ನು ಜಿಲ್ಲಾ ಅಧ್ಯಕ್ಷರ ಮೂಲಕ ಪಡೆದುಕೊಂಡು ಉತ್ತಮ ಜೀವನವನ್ನು ನಡೆಸುವಂತೆ ಹೇಳಿದರು.
ಕಾರ್ಮಿಕ ಸಂಘವು 1920ರ ಅಕ್ಟೋಬರ್ 31ರಂದು ಪಂಜಾಬಿನ ಸಿಂಹ ಎಂದು ಹೆಸರಾಗಿರುವಂತ ಲಾಲಾ ಲಜಪತ್ರಾಯ್ ಆರಂಭಿಸಿದರು. ಈ ಸಂಘವು ದೇಶಾದ್ಯಂತ ಹೆಸರುವಾಸಿಯಾಗಿದ್ದು, ಇಲ್ಲಿಯವರೆಗೂ ಮಾಡಿರುವ ಸಾಧನೆಗಳ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ರೈತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖಗೌಡ ಮಾಗನೂರ, ಕಾರ್ಮಿಕರ ಇಲಾಖೆಯಲ್ಲಿ ಬರತಕ್ಕಂತ ಎಲ್ಲಾ ಸೌಲಭ್ಯಗಳನ್ನು ಸರಿಯಾದ ಸಮಯದಲ್ಲಿ, ಸರಿಯಾದ ಸಮಯಕ್ಕೆ ದೊರಕಿಸಿಕೊಡುವಲ್ಲಿ ನಾನೂ ಕೂಡ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ಎಲ್ಲಾ ಕಾರ್ಮಿಕರ ಮನೆಯಲ್ಲಿ ಪ್ರತಿಯೊಂದು ಮಗು ವಿದ್ಯಾವಂತನಾದಲ್ಲಿ ಬದುಕು ಬಂಗಾರವಾಗುತ್ತದೆ ಎಂದು ಹೇಳಿದರು.
ಕಾರ್ಮಿಕ ನಿರೀಕ್ಷಕ ಚೆನ್ನರಾಡ್ಡಿ ಚವ್ಹಾಣ ಮಾತನಾಡಿ, ಪ್ರತಿ ತಿಂಗಳಿಗೆ ಒಬ್ಬರು ಐದು ಜನರನ್ನು ಸಂಘದ ಸದಸ್ಯರನ್ನು ಮಾಡಿಸಿದಾಗಿ ಯಾದಗಿರಿ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರು ಎಷ್ಟಿದ್ದಾರೆ ಎಂದು ತಿಳಿಯುತ್ತದೆ. ಕಾರ್ಮಿಕರ ಸಂಘಕ್ಕೆ ಸದಸ್ಯರಾಗಬಯಸುವರು ಯಾವ ದಾಖಲೆಗಳನ್ನು ಸಂಘಕ್ಕೆ ಸಲ್ಲಿಸಬೇಕೆಂದು ತಿಳಿಸಿದರು.
ಗುಂಡಪ್ಪ ಜಮಖಂಡಿ ಮಾತನಾಡಿ, ಕಾರ್ಮಿಕರು ಅಭಿವೃದ್ಧಿ ಮಂಡಳಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡು ಪ್ರತಿವರ್ಷ ನವೀಕರಣ ಕಡ್ಡಾಯವಾಗಿ ಮಾಡಿದರೆ ಯೋಜನೆಗಳು ದೊರೆಯುತ್ತವೆ ಎಂದು ತಿಳಿಸಿದರು.
ಮುನ್ನಡೆಸಿ: ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಸೈದಪ್ಪ ಗುತ್ತೇದಾರ ಮಾತನಾಡಿ, ನಿಷ್ಠಾವಂತ ಕಾರ್ಮಿಕರಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಇಡೀ ಯಾದಗಿರಿ ಜಿಲ್ಲೆಯಲ್ಲಿ ಕಾರ್ಮಿಕರ ಕಷ್ಟಗಳು ಪರಿಹಾರ ಆಗಲಿವೆ. ಒಳ್ಳೆಯ ಕಾರ್ಮಿಕರಿಗೆ ಒಳ್ಳೆಯ ಸ್ಥಾನಮಾನಗಳನ್ನು ನೀಡಿದಾಗ ಮಾತ್ರ ಅವರು ಮನ-ಪೂರ್ವಕವಾಗಿ ಜಿಲ್ಲಾದ್ಯಂತ ಕಾರ್ಮಿಕರ ಸಂಘಟನೆಗಳನ್ನು ಮುನ್ನಡಿಸಿಕೊಂಡು ಹೋಗಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಪಿಡ್ಡಪ್ಪ ಒಗ್ಗನ್, ಹಣಮಂತ ದೇವತ್ಕಲ್, ದೇವುಜೀ ಜಾದವ, ಎಂ.ಡಿ. ಹಾಜಿ, ಶಿವಶೇಖರಪ್ಪ ಅಜರುಣಗಿ, ಸುರೇಶ ಮುರಡೆ, ನಿಂಗಣ್ಣ ವಂದಲ್ ವೇದಿಕೆಯಲ್ಲಿದ್ದರು. ಕಮರುದ್ದಿನ್ ಅಲ್ಲಿಪೂರ ನಿರೂಪಿಸಿದರು. ಹೊನ್ನಪ್ಪ ದೇವರಹಳ್ಳಿ ಸ್ವಾಗತಿಸಿದರು. ಗೋವಿಂದರಾಜ ಬೈಲಪತ್ತಾರ ವಂದಿಸಿದರು. ಇದಕ್ಕೂ ಮುಂಚೆ ಕಾರ್ಮಿಕರು ಪಾದಯಾತ್ರೆಯ ಮೂಲಕ ಪ್ರವಾಸಿ ಮಂದಿರದಿಂದ, ಶಾಸ್ತ್ರಿ ವೃತ್ತ, ಸುಭಾಶ ವೃತ್ತ, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮೂಲಕ ಚರ್ಚ್ಗೆ ಆಗಮಿಸಿದರು.