ಖಾಸಗಿ ಬಸ್‌ಗಳಿಗೆ ಕಡಿವಾಣ, ನೂತನ ಬಸ್‌ಗಳ ಪ್ರಾರಂಭ
ಕನ್ನಡಪ್ರಭ ವಾರ್ತೆ , ಕೆಂಭಾವಿ , ಮೇ 25
ಸಾರಿಗೆ ನಿಗಮಕ್ಕೆ ಖಾಸಗಿ ಸೆಡ್ಡು ಎಂಬ ಶೀರ್ಷಿಕೆಯಡಿ ಮೇ 20ರಂದು ಕನ್ನಡಪ್ರಭದಲ್ಲಿ ಪ್ರಕಟಗೊಂಡ ವರದಿ ಫಲ ನೀಡಿದೆ.
ಹೊಸ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳನ್ನು ಓಡಿಸುವ ಮೂಲಕ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಂಡು ಸಾರಿಗೆ ನಿಗಮಕ್ಕೆ ಸವಾಲಾಗಲು ಮುಂದಾಗಿವೆ ಎಂದು ನಮ್ಮ ಪತ್ರಿಕೆ ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ಅವರು ನೂತನವಾಗಿ ಗುರಮಠಕಲ್ ಮತ್ತು ಶಹಾಪುರಕ್ಕೆ 8 ಬಸ್‌ಗಳನ್ನು ಮತ್ತು ಕೆಂಭಾವಿ ಮಾರ್ಗವಾಗಿ ಯಾದಗಿರಿ, ಕೂಡಲಸಂಗಮಕ್ಕೆ 2 ಬಸ್‌ಗಳನ್ನು, ಗುಲ್ಬರ್ಗ, ಕೂಡಲ ಸಂಗಮಕ್ಕೆ 2 ಬಸ್‌ಗಳ ಸಂಚಾರವನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರವಾಸಿ ತಾಣ: ಯಾದಗಿರಿ ಜಿಲ್ಲೆಯಲ್ಲಿನ ಅನೇಕ ಪ್ರವಾಸಿ ತಾಣಗಳನ್ನು ಮುಂದಿಟ್ಟುಕೊಂಡು ಖಾಸಗಿ ಬಸ್ಸಿನ ಮಾಲಿಕರು ತಮ್ಮ ಬಸ್‌ಗಳನ್ನು ಓಡಿಸಲು ಹುನ್ನಾರು ನಡೆಸಿದ್ದರು. ಈ ಹಿನ್ನಲೆಯಲ್ಲಿ ಜಿಲ್ಲೆಯ ಮೂರು ತಾಲೂಕಿನಲ್ಲಿರುವ ಪ್ರಮುಖ ಪ್ರವಾಸಿ ತಾಣಗಳನ್ನು ಗುರ್ತಿಸಿದ ಎನ್‌ಇಕೆಆರ್ಟಿಸಿ ನೂತನ ಬಸ್ ಸಂಚಾರವನ್ನು ಪ್ರಾರಂಭಿಸಿ ಖಾಸಗಿ ಬಸ್‌ಗಳ ಪ್ರಾಬಲ್ಯಕ್ಕೆ ತಡೆಯೊಡ್ಡಿದ್ದಾರೆ.
ಶಹಾಪುರದಿಂದ ಯಾದಗಿರಿ, ಗುರುಮಿಠಕಲ್, ಯಾನಾಗುಂದಿ, ನಾರಾಯಣಪುರ, ಕೆಂಭಾವಿ, ಮುದನೂರ, ಕೊಡೆಕಲ್, ಕೂಡಲಸಂಗಮ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿಗೆ ಬಸ್‌ಗಳು ಓಡಾಟ ಆರಂಭಿಸಿವೆ.
ಈಶಾನ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸದರಿ ಮಾರ್ಗಗಳಲ್ಲಿ ಬಸ್ಸಿನ ಸಂಚಾರ ಪ್ರಾರಂಭಿಸಿ ಜನತೆಗೆ ಅನಕೂಲ ಮಾಡಿಕೊಟ್ಟಿದ್ದು ಆಯಾ ಭಾಗದ ಜನತೆಗೆ ಸಂತೋಷ ಉಂಟುಮಾಡಿದೆ.
ಹೆಚ್ಚುವರಿ ಬಸ್: ಈ ಪ್ರವಾಸಿ ತಾಣಗಳಲ್ಲಿ ಬಸ್‌ಗಳು ಇರದ ಕಡೆ ಬಸ್‌ಗಳನ್ನು ಆರಂಭಿಸುವಂತೆ ಬಿಜಾಪುರ, ಯಾದಗಿರಿ, ಗುಲ್ಬರ್ಗ, ರಾಯಚೂರು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಇನ್ನೂ ಹೆಚ್ಚುವರಿ ಬಸ್‌ಗಳನ್ನು ಹಾಕುವಂತೆ ಸೂಚನೆ ಕೊಟ್ಟಿದ್ದೇನೆ ಎಂದು ಪತ್ರಿಕೆಗೆ ದೂರವಾಣಿ ಮುಖಾಂತರ ತಿಳಿಸಿದ್ದಾರೆ.
ನೂತನವಾಗಿ ಪ್ರಾರಂಭಗೊಂಡ ಈ ಬಸ್‌ಗಳಲ್ಲಿ ಪ್ರಯಾಣಿಕರು ಸಂಚರಿಸುವ ಮೂಲಕ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಖಾಸಗಿ ಬಸ್‌ಗಳ ಸಂಚಾರ ಎಲ್ಲಿಯಾದರೂ ಕಂಡಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ವರದಿ ಮುಟ್ಟಿಸಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷಕುಮಾರ ತಿಳಿಸಿದ್ದಾರೆ.