ಭ್ರಷ್ಟಾಚಾರ ತಡೆಗೆ ಒತ್ತಾಯಿಸಿ ಸಾರಿಗೆ ಸಂಸ್ಥೆ ನಿರ್ದೇಶಕರಿಗೆ ಪತ್ರ
ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಮೇ 25
ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟಲು ಮತ್ತು ಸಮಯಕ್ಕೆ ಸರಿಯಾಗಿ ಬಸ್ಸುಗಳು ಓಡಿಸಲು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಮತ್ತು ಸಿಪಿಐ (ಎಂ) ಜಿಲ್ಲಾ ಸಂಚಾಲಕ ಸಮಿತಿ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಈಶಾನ್ಯ ವಲಯ ಸಾರಿಗೆ ಸಂಸ್ಥೆ ನಿರ್ದೇಶಕರಿಗೆ ಬರೆದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಪೂರ್ತಿಯಾಗಿ ಹದಗೆಟ್ಟಿದೆ. ಜಿಲ್ಲೆಯಲ್ಲಿರುವ ಸಾರಿಗೆ ಸಂಸ್ಥೆಗಳಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿರುವುದರಿಂದ ಬಸ್ಸುಗಳು ಎಲ್ಲೆಂದರಲ್ಲಿ ಕೆಟ್ಟು ನಿಂತು ಪ್ರಯಾಣಿಕರಿಗೆ ಬಹಳ ತೊಂದರೆಯಾಗುತ್ತಿದೆ. ಪ್ರಯಾಣಿಕರು ತಾವು ಹೋಗಬೇಕಾದ ಸ್ಥಳಕ್ಕೆ ತಲುಪುವ ಭರವಸೆ ಇಲ್ಲದಂತಾಗಿದೆ.
ಬಸ್ಸು ಘಟಕಗಳಿಗೆ ಕಳೆಪೆ ಮಟ್ಟದ ಮೋಟಾರ್ ಪಾರ್ಟ್ಸ್ ಸರಬರಾಜು ಅಲ್ಲದೆ ಟೈರುಗಳು ಪೂರ್ತಿ ಹದಗೆಟ್ಟಿದ್ದು, ಅನೇಕ ಬಸ್ಸುಗಳು ಓಡುವ ಸ್ಥಿತಿಯಲ್ಲಿಲ್ಲ. ಸಮಯಕ್ಕೆ ಸರಿಯಾಗಿ ಬಸ್ಸುಗಳನ್ನು ಓಡಿಸದೇ ಇರುವುದರಿಂದ ಸಾರಿಗೆ ಸಂಸ್ಥೆ ಮೇಲೆ ಜನರು ವಿಶ್ವಾಸ ಮಾಡದೆ ಖಾಸಗಿ ಬಸ್ಸುಗಳಲ್ಲಿ ಪ್ರಯಾಣ ಮಾಡುತ್ತಿರುವುದು ಹೆಚ್ಚುತ್ತಿದೆ.
ಸಿಪಿಐ (ಎಂ) ಪಕ್ಷವು ಕಳೆದ ಒಂದು ತಿಂಗಳಿನಿಂದ ಖಾಸಗಿ ಬಸ್ಸುಗಳ ಹಾವಳಿ ತಡೆಗಟ್ಟಲು ಚಳವಳಿ ನಡೆಸುತ್ತಿದೆ. ಗುಲ್ಬರ್ಗ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಖಾಸಗಿ ಬಸ್ಸುಗಳ ಸ್ಫರ್ಧೆಗಾಗಿ ಒಳ್ಳೆಯ ಬಸ್ಸುಗಳು ಓಡಿಸಲು ವಿನಂತಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಾರಿಗೆ ಸಂಸ್ಥೆ ಅಧಿಕಾರಿಗಳು ಕೂಡ ಖಾಸಗಿ ಬಸ್ಸು ಮಾಲಿಕರ ಪರ ಇದ್ದಾರೆ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅತೀ ಶೀಘ್ರದಲ್ಲಿ ಸಾರಿಗೆ ಸಂಸ್ಥೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟಿ, ಖಾಸಗಿ ಬಸ್ಗಳ ಹಾವಳಿ ತಪ್ಪಿಸಲು ಸರಿಯಾದ ಸಮಯಕ್ಕೆ ಒಳ್ಳೆಯ ಬಸ್ಗಳನ್ನು ಓಡಿಸಲು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.