ಶೆಟ್ಟರ್ ನಿರ್ಣಯಕ್ಕೆ 'ಕೈ' ಶಟರ್?
ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಮೇ 25
ಆರ್ಥಿಕ ಲೆಕ್ಕಾಚಾರ, ಪರಿಣಾಮಗಳ ಪರಾಮರ್ಶೆ ಹಿನ್ನೆಲೆಯಲ್ಲಿ 43 ಹೊಸ ತಾಲೂಕುಗಳ ರಚನೆ ಕಷ್ಟ ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕಂದಾಯ ಸಚಿವ ಶ್ರೀನಿವಾಸಪ್ರಸಾದ್ ನೀಡಿರುವ ಹೇಳಿಕೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಫೆ.9ರಂದು ಮಂಡಿಸಿದ್ದ ಬಜೆಟ್ನಲ್ಲಿ ಘೋಷಿಸಿದ್ದ 43 ಹೊಸ ತಾಲೂಕುಗಳ ರಚನೆ ಪ್ರಕ್ರಿಯೆಯನ್ನೇ ಗಜ ಪ್ರಸವವಾಗಿಸಿದೆ.
ಅಗತ್ಯ ಇರುವ ಕಡೆಗಳಲ್ಲಷ್ಟೆ ತಾಲೂಕು ರಚನೆ ಬಗ್ಗೆ ಮರು ಪರಿಶೀಲನೆ ಮಾಡಬಹುದು ಎಂದು ಹೇಳುವ ಮೂಲಕ ಶ್ರೀನಿವಾಸಪ್ರಸಾದ್ ಬಿಜೆಪಿ ಸರ್ಕಾರದ ಹೊಸ ತಾಲೂಕು ರಚನೆ ಪ್ರಸ್ತಾವನೆ ರದ್ದಾದಂತೆಯೇ ಎಂದು ಸೂಚ್ಯವಾಗಿ ಹೇಳಿರುವುದು ಇದೀಗ ಜನಸಾಮಾನ್ಯರ ಗಮನ ಸೆಳೆದಿದೆ.
ರಾಜಕೀಯ ಸರಕು: ಆಡಳಿತಾತ್ಮಕ ಅನುಕೂಲಗಳಿಗಾಗಿ ತಾಲೂಕು ವಿಭಜನೆ, ಹೊಸ ತಾಲೂಕು ರಚನೆಯ ಸಂಗತಿ ದಶಕಗಳಿಂದ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದವರ ತಲೆ ತಿನ್ನುತ್ತಿತ್ತು. ಈ ವಿಷಯದ ಪರಾಮರ್ಶೆಗೆಂದೇ ರಚನೆಯಾದ ಸಮಿತಿಗಳಿಗೆ ಲೆಕ್ಕವೇ ಇರಲಿಲ್ಲ. ವಾಸುದೇವರಾವ, ಗದ್ದಿಗೌಡರ್, ಹುಂಡೇಕಾರ್, ಪ್ರಕಾಶ ಸಮಿತಿಗಳು ಕಳೆದ 4 ದಶಕಗಳಲ್ಲಿ ಹೊಸ ತಾಲೂಕುಗಳ ವಿಚಾರ ಪರಾಮರ್ಶೆಗೊಳಪಡಿಸಿ, ಕ್ಷೇತ್ರ ಸಂಚರಿಸಿ, ಅಂಕಿ- ಸಂಖ್ಯೆ ಸಮೇತ ಅಧ್ಯಯನ ಪೂರ್ಣ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದವು.
ಇವೆಲ್ಲ ವರದಿಗಳ ಹಿನ್ನೆಲೆಯಲ್ಲೇ 43 ತಾಲೂಕುಗಳ ರಚನೆಗೆ ಮುಂದಾಗಿದ್ದಾಗಿ ಬಿಜೆಪಿ ಹೇಳಿಕೊಂಡಿತ್ತು. ಆದರೀಗ ಬಿಜೆಪಿಯ ಈ ನಿರ್ಣಯವನ್ನು ಕಾಂಗ್ರೆಸ್ ಸರ್ಕಾರ ಬದಿಗೆ ಸರಿಸುವ ಮೂಲಕ ಈ ಸಂಗತಿಯನ್ನು ರಾಜಕೀಯ ವಾದ- ವಿವಾದಗಳ ಸರಕಾಗುವಂತೆ ಮಾಡಿದೆ.
ಆಡಳಿತ ದೃಷ್ಟಿಕೋನದಿಂದ ಉತ್ತಮ: ತಾಲೂಕು ಕೇಂದ್ರಗಳು ಚಿಕ್ಕದಾದಷ್ಟು ಪ್ರಗತಿಗೆ ಪೂರಕ ಎಂಬುದು ಅನೇಕರ ಅಭಿಮತ. ಅದಕ್ಕೆಂದೇ ತಾಲೂಕು ವಿಭಜನೆ, ಹೊಸ ತಾಲೂಕು ರಚನೆ ವಿಷಯವೆಂದರೆ ಜೇನುಗೂಡು ಎಂದೇ ಹೇಳಲಾಗುತ್ತದೆ. ಒಂದು ಪ್ರದೇಶಕ್ಕೆ ತಾಲೂಕು ಸ್ಥಾನಮಾನ ನೀಡಿದಲ್ಲಿ ಸಹಜವಾಗಿಯೇ ಮತ್ತೊಂದು ಪ್ರದೇಶದವರು ಕೋಪಿಸಿಕೊಳ್ಳುತ್ತಾರೆ. ಹಾಗಂತ ಸಹಜ ನ್ಯಾಯ ನೀಡದೆ ಹಾಗೆ ಎಷ್ಟಂತ ದಿನ ಕುಳಿತುಕೊಳ್ಳುವುದು.
ಇತ್ತೀಚೆಗೆ ಎಂ.ಬಿ. ಪ್ರಕಾಶ ನೇತೃತ್ವದ ಪರಿಣಿತರ ಸಮಿತಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ತಾಲೂಕು ರಚನೆಯ ಶಕ್ಯತಾ ವರದಿ ನೀಡಿದ ನಂತರವಂತೂ ಹೊಸ ತಾಲೂಕು ರಚನೆ ಕೂಗು ಮುಗಿಲು ಮುಟ್ಟಿತ್ತು.
ಭೌಗೋಳಿಕ ಆಧಾರ, ಆಡಳಿತಾತ್ಮಕ ದೃಷ್ಟಿಕೋನದ ಹಿನ್ನೆಲೆಯಲ್ಲಿ ಹೊಸ ತಾಲೂಕು ರಚನೆಯ ಬೇಡಿಕೆ ಸದಾ ಹಸಿರಾಗಿರುತ್ತವೆ. ಸೌಲಭ್ಯಪೂರ್ಣ ನಮ್ಮೂರಿಗೆ ಯಾಕೆ ತಾಲೂಕು ಸ್ಥಾನಮಾನ ಕೊಡಬಾರದು ಎಂಬುದು ಆಯಾ ಊರು- ಕೇರಿಗಳ ಜನರ ಪ್ರಶ್ನೆ.
ಆದರೆ ಇಂತಹ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಸೂಕ್ತ ಉತ್ತರ ಹುಡುಕಿ, ಬೇಡಿಕೆಗಳ ಪರಾಮರ್ಶೆ ಮಾಡಿ ಹೊಸ ತಾಲೂಕು ಸ್ವರೂಪ ನಿರ್ಧರಿಸಿ ಅವುಗಳನ್ನು ಘೋಷಣೆ ಮಾಡುವ ಪ್ರಕ್ರಿಯೆ ಇದೆಯಲ್ಲ, ಅದು ತುಂಬ ಸೂಕ್ಷ್ಮ, ಅಷ್ಟೇ ಭಾವನಾತ್ಮಕ ಅಂಶವೂ ಹೌದು.
ವಿವಾದದ ಬುಟ್ಟಿ: ಹಿಂದೆ ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ 8 ಹೊಸ ಜಿಲ್ಲೆ ರಚಿಸುವ ಮೂಲಕ ಜನಮನ ಸೂರೆಗೊಂಡಿದ್ದರು. ತೀರ ಈಚೆಗಷ್ಟೆ ಯಡಿಯೂರಪ್ಪ ದಿಢೀರನೇ ಗುಲ್ಬರ್ಗ ವಿಭಜಿಸಿ ಯಾದಗಿರಿಗೆ ಜಿಲ್ಲಾ ಪಟ್ಟ ಕಟ್ಟಿ ಸುದ್ದಿಯಾಗಿದ್ದರು. ಆದರೀಗ ಶೆಟ್ಟರ್ ಸರ್ಕಾರ ಘೋಷಿಸಿರುವ ಹೊಸ ತಾಲೂಕು ಪ್ರಸ್ತಾವನೆಗೆ ಕಾಂಗ್ರೆಸ್ ರೆಡ್ ಸಿಗ್ನಲ್ ತೋರಲು ಸಜ್ಜಾಗಿರುವುದು ತಾಲೂಕು ರಚನೆಯ ಕನಸು ಕಟ್ಟಿಕೊಂಡವರನ್ನು ಕೆರಳುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ.
ಕಾಂಗ್ರೆಸ್ನ ಈ ಹೊಸ ನಡೆ ತಾಲೂಕು ರಚನೆಯ ವಿಷಯಕ್ಕೆ ಬಹುಕಾಲ ವಿವಾದದ ಬುಟ್ಟಿಯಲ್ಲೇ ಇಡುವುದಲ್ಲದೆ, ಬಹುಕಾಲ ರಾಜ್ಯದ ಜನಮನದ ಚರ್ಚೆಯಲ್ಲಿರುವಂತೆ ಮಾಡುವುದು ನಿಶ್ಚಿತ.
ಉ-ಕ ಪ್ರಗತಿಗೆ ಪೆಟ್ಟು: ಬಿಜೆಪಿ ಸರ್ಕಾರದ ಸಿಎಂ ಶೆಟ್ಟರ್ ಘೋಷಣೆ ಮಾಡಿರುವ ಹೊಸ 43 ತಾಲೂಕುಗಳ ಪೈಕಿ 34 ಉ-ಕ ಭಾಗಕ್ಕೆ ಸೇರಿದ್ದವು. ಈ ಪೈಕಿ 18 ಹೈ-ಕ ಭಾಗದಲ್ಲಿವೆ. ತಾಲೂಕು ರಚನೆಯಲ್ಲಿ ಉ-ಕ ಸಿಂಹಪಾಲು ಹೊಂದಿತ್ತು. ಚಿಕ್ಕದಾದ ತಾಲೂಕುಗಳಿಂದ ಪ್ರಗತಿಯ ಹೊಸ ಮನ್ವಂತರದಲ್ಲಿ ಕಾಲಿಡುವ ಉ-ಕ ಮಂದಿಯ ಕನಸು ಕಾಂಗ್ರೆಸ್ನ ಈ ತಕರಾರಿನಿಂದಾಗಿ ಕಮರಿಹೋದಂತಾಗಿದೆ.
ಕಾಂಗ್ರೆಸ್ನ ಅಪಸ್ವರದಿಂದಾಗಿ ಹೊಸ ತಾಲೂಕು ಯೋಗಾಯೋಗ ಕೂಡಿ ಬಂದಿದ್ದ ಈ ಕೆಳಗಿನ ಪ್ರದೇಶಗಳೆಲ್ಲವೂ ಯಥಾರೀತಿ ಮುಂಚೆ ಇದ್ದಂತೆಯೇ ಮುಂದುವರಿಯಲಿವೆ.
- ಶೇಷಮೂರ್ತಿ ಅವಧಾನಿ