ಸಾರಿಗೆ ಸಂಸ್ಥೆ ನಿರ್ದೇಶಕರಿಗೆ ಪತ್ರ
ಗುಲ್ಬರ್ಗ: ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟಲು ಮತ್ತು ಸಮಯಕ್ಕೆ ಸರಿಯಾಗಿ ಬಸ್ಸುಗಳು ಓಡಿಸಲು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಮತ್ತು ಸಿಪಿಐ (ಎಂ) ಜಿಲ್ಲಾ ಸಂಚಾಲಕ ಸಮಿತಿ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಈಶಾನ್ಯ ವಲಯ ಸಾರಿಗೆ ಸಂಸ್ಥೆ ನಿರ್ದೇಶಕರಿಗೆ ಬರೆದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಪೂರ್ತಿಯಾಗಿ ಹದಗೆಟ್ಟಿದೆ. ಜಿಲ್ಲೆಯಲ್ಲಿರುವ ಸಾರಿಗೆ ಸಂಸ್ಥೆಗಳಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿರುವುದರಿಂದ ಬಸ್ಸುಗಳು ಎಲ್ಲೆಂದರಲ್ಲಿ ಕೆಟ್ಟು ನಿಂತು ಪ್ರಯಾಣಿಕರಿಗೆ ಬಹಳ ತೊಂದರೆಯಾಗುತ್ತಿದೆ. ಪ್ರಯಾಣಿಕರು ತಾವು ಹೋಗಬೇಕಾದ ಸ್ಥಳಕ್ಕೆ ತಲುಪುವ ಭರವಸೆ ಇಲ್ಲದಂತಾಗಿದೆ.
ಸಿಪಿಐ (ಎಂ) ಪಕ್ಷವು ಕಳೆದ ಒಂದು ತಿಂಗಳಿನಿಂದ ಖಾಸಗಿ ಬಸ್ಸುಗಳ ಹಾವಳಿ ತಡೆಗಟ್ಟಲು ಚಳವಳಿ ನಡೆಸುತ್ತಿದೆ. ಗುಲ್ಬರ್ಗ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಖಾಸಗಿ ಬಸ್ಸುಗಳ ಸ್ಫರ್ಧೆಗಾಗಿ ಒಳ್ಳೆಯ ಬಸ್ಸುಗಳು ಓಡಿಸಲು ವಿನಂತಿಸಿದರೂ ಯಾವುದೇ ಪ್ರಯೋಜನವಾಗಿಲ್ಲಎಂದು ಆರೋಪಿಸಿದ್ದಾರೆ. ಸಾರಿಗೆ ಸಂಸ್ಥೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟಿ, ಖಾಸಗಿ ಬಸ್ ಹಾವಳಿ ತಪ್ಪಿಸಲು ಸರಿಯಾದ ಸಮಯಕ್ಕೆ ಒಳ್ಳೆಯ ಬಸ್‌ಗಳನ್ನು ಓಡಿಸಲು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.