ಅಧಿಕಾರಿಗಳ ದಾರಿದ್ರ್ಯಕ್ಕೆ ಉಪ 'ಲೋಕಾ' ಆಕ್ರೋಶ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 26
ಉಪ ಲೋಕಾಯುಕ್ತ ನ್ಯಾಯಮೂರ್ತಿ ಗುರುರಾಜ ಮಜಗೆ ಅವರು ಭಾನುವಾರ ಹಠಾತ್ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಉಪ ಲೋಕಾಯುಕ್ತರು ಅಲ್ಲಿನ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಅಲ್ಲಿನ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಆಸ್ಪತ್ರೆಯಲ್ಲಿನ ರೋಗಿಗಳನ್ನು ಭೇಟಿ ಮಾಡಿ ಅವರ ಸಮಸ್ಯೆ ಆಲಿಸಿದ ಮಜಗಿ ಅವರು, ವೈದ್ಯರು ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೋ ಇಲ್ಲವೋ ಎಂದು ಪ್ರಶ್ನಿಸಿದರು. ರೋಗಿಗಳಿಗೆ ಸರಿಯಾದ ವೈದ್ಯಕೀಯ ಸೇವೆ ಕಲ್ಪಿಸಬೇಕು ಎಂದು ವೈದ್ಯರಿಗೆ ಸೂಚನೆ ನೀಡಿದರು.
ರಸ್ತೆ ಕಾಮಗಾರಿ ಪರಿಶೀಲನೆ: ನಂತರ ಹುಮನಾಬಾದ್ ರಸ್ತೆಯ ಬಂಬೂ ಬಜಾರ್ದಿಂದ ವರ್ತುಲ್ ರಸ್ತೆವರೆಗಿನ ಸಿಸಿ ರಸ್ತೆ ಕಾಮಗಾರಿ ಪರಿಶೀಲಿಸಿ ಮಂದಗತಿಯಲ್ಲಿ ಕಾಮಗಾರಿ ನಡೆದಿದ್ದು, ಗುಣಮಟ್ಟದ ಕಾಮಗಾರಿಯೊಂದಿಗೆ ಶೀಘ್ರ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಂಬಂಧಿಸಿದ ಎಂಜಿನಿಯರ್ಗೆ ಸೂಚಿಸಿದರು.
ಖರ್ಗೆ ಪೆಟ್ರೋಲ್ ಬಂಕ್ದಿಂದ ಅನ್ನಪೂರ್ಣ ಕ್ರಾಸ್ವರೆಗಿನ ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಸಂಬಂಧಿಸಿದ ಎಂಜಿನಿಯರ್ಗೆ ಸೂಚಿಸಿದ ಉಪ ಲೋಕಾಯುಕ್ತರು, 18 ಕೋಟಿ ವೆಚ್ಚದ ಕಾಮಗಾರಿಯ ಅನುದಾನ ಬಿಡುಗಡೆಗಾಗಿ ಕ್ಯಾಬಿನೆಟ್ಗೆ ಕಳುಹಿಸಲಾಗಿದ್ದು, ಅಲ್ಲಿ ಅನುಮೋದನೆ ದೊರೆತ ತಕ್ಷಣ ಕಾಮಗಾರಿ ಕೈಗೊಳ್ಳುವುದಾಗಿ ಎಂಜಿನಿಯರ್ ಸಮಾಜಾಯಿಷಿ ನೀಡಿದಾಗ ಉಪ ಲೋಕಾಯುಕ್ತರು ನಾಳೆ ಎಲ್ಲ ದಾಖಲಾತಿ ತೋರಿಸುವಂತೆ ಸೂಚಿಸಿದರು.
ಎಚ್ಚರಿಕೆ: ನಗರದ ರೇಲ್ವೆ ನಿಲ್ದಾಣದಿಂದ ಮೋಹನ್ ಲಾಡ್ಜ್ವರೆಗಿನ ರಸ್ತೆ ಕಾಮಗಾರಿಯನ್ನು 15 ದಿನಗಳಲ್ಲಿ ಪೂರ್ಣಗೊಳಿಸಬೇಕು ಮತ್ತು ಗುಣಮಟ್ಟದಿಂದ ಕೂಡಿರಬೇಕು ಎಂದು ಸೂಚಿಸಿದರು. ಕಿರಣಾ ಬಜಾರ ರಸ್ತೆಗಾಗಿ 3 ಕೋಟಿ ಸರ್ಕಾರದಿಂದ ಬಿಡುಗಡೆಯಾಗಿದೆ. ಆದರೆ, ಕಾಮಗಾರಿ ಮಾತ್ರ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಉಪ ಲೋಕಾಯುಕ್ತರು, ಕೂಡಲೇ ಕಾಮಗಾರಿ ಕೈಗೊಳ್ಳದಿದ್ದರೆ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ಬಿಸಿಯೂಟ ನಿಲ್ಲಿಸೀರಿ.. ಜೋಕೆ!: ಗುಲಾಬವಾಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಉಪ ಲೋಕಾಯುಕ್ತರು ಅಲ್ಲಿನ ಬಿಸಿಯೂಟ ತಾವೇ ತಿಂದು ಪರಿಶೀಲಿಸಿ ಉತ್ತಮ ಗುಣಮಟ್ಟದ ಅಕ್ಕಿ, ತರಕಾರಿ ಇತರ ಪದಾರ್ಥಗಳನ್ನು ಉಪಯೋಗಿಸಬೇಕು ಮತ್ತು ಯಾವುದೇ ಕಾರಣಕ್ಕೂ ಬಿಸಿಯೂಟ ನಿಲ್ಲಿಸಬಾರದು ಎಂದು ಅಲ್ಲಿನ ಮೇಲ್ವಿಚಾರಕರಿಗೆ ಸೂಚಿಸಿದರು.
ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ, ಬಿಸಿಯೂಟ ಮಾಡಿದ ಪ್ರಮಾಣ ಪರಿಶೀಲಿಸಿದ ಉಪ ಲೋಕಾಯುಕ್ತರು ನಗರದಲ್ಲಿರುವ ಶಾಲೆಗಳಿಗೆ ಭೇಟಿ ನೀಡಿ ಸಮರ್ಪಕವಾಗಿ ಬಿಸಿಯೂಟ ನೀಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಲು ಗುಲ್ಬರ್ಗ ಸ್ಥಳೀಯ ಲೋಕಾಯುಕ್ತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಲೋಕಾಯುಕ್ತ ಅಧಿಕಾರಿಗಳಾದ ಡಿಎಸ್ಪಿ ರವಿ ಪಾಟೀಲ್, ಇನ್ಸ್ಪೆಕ್ಟರ್ಗಳಾದ ತಮ್ಮರಾಯ ಪಾಟೀಲ್, ಜೇಮ್ಸ್ ಮಿನೇಜಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.