ಕಳೆಯದೆ ಉಳಿಯುವುದು ವಿದ್ಯೆಯೊಂದೇ
ಕನ್ನಡಪ್ರಭ ವಾರ್ತೆ, ಸೇಡಂ, ಮೇ 26
ಶಿಕ್ಷಣಕ್ಕಾಗಿ ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಜನರು ಬಳಸಿಕೊಳ್ಳುವ ಮೂಲಕ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದಾಗ ಮಾತ್ರ ಕಳೆಯದೆ ವಿದ್ಯೆ ಉಳಿಯಲು ಸಾಧ್ಯ ಎಂದು ನೃಪತುಂಗ ಕಾಲೇಜು ಉಪನ್ಯಾಸಕಿ ಡಾ. ಚಂದ್ರಕಲಾ ಬಿದರಿ ಹೇಳಿದರು.
ಪಟ್ಟಣದ ವೆಂಕಟೇಶ ನಗರದಲ್ಲಿ ನಮೋ ಬುದ್ಧ ಸೇವಾ ಕೇಂದ್ರ ಚಾರಿಟಬಲ್ ಮತ್ತು ವೆಲ್ಫೇರ್ ಟ್ರಸ್ಟ್ ಮಳಖೇಡ ಆಯೋಜಿಸಿದ್ದ ಗುಡಿಸಲು ಮಕ್ಕಳನ್ನು ಕತ್ತಲಿಂದ ಬೆಳಕಿನೆಡೆಗೆ ಕರೆದೊಯ್ಯುವ ಶಾಲೆಗೆ ಬಾ ಬಾಲೆ ಕಾರ್ಯಕ್ರಮವನ್ನು ಚಿಣ್ಣರಿಗೆ ಅಂಕಲಿಪಿ ಪುಸ್ತಕ ಹಂಚುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿ, ಸಂವಿಧಾನದ ಅರಿವು ಅರಿತು ಶೈಕ್ಷಣಿವಾಗಿ ಮುಂದಾಗಬೇಕು ಎಂದರು.
ಶಿಕ್ಷಕರ ಪ್ರತಿಭಾ ಪರಿಷತ್ತಿನ ಅಧ್ಯಕ್ಷ ಅಶೋಕರೆಡ್ಡಿ ಚಿಲುಮೆ ಮಾತನಾಡಿ, ಸರ್ಕಾರ ಮಕ್ಕಳಿಗೆ ನೀಡಿರುವ ಕಡ್ಡಾಯ ಶಿಕ್ಷಣ ಕಸಿಯುವ ಅಧಿಕಾರ ಯಾವುದೇ ತಂದೆ- ತಾಯಿಗಿಲ್ಲ. ಕೆಟ್ಟ ಚಟಗಳಿಂದ ದೂರವಿದ್ದು, ಶಿಕ್ಷಣದಿಂದ ಉನ್ನತ ಹುದ್ದೆ ಸಾಧಿಸುವ ಮೂಲಕ ದೇಶಕ್ಕೆ ಮಾದರಿಯಾಗಬೇಕು ಎಂದರು.
ಪುರಸಭೆ ಸದಸ್ಯ ಜಗನ್ನಾಥ ಚಿಂತಪಳ್ಳಿ ಮಾತನಾಡಿದರು. ಮುಖಂಡ ಸಾಯಪ್ಪ, ಪತ್ರಕರ್ತ ರಮೇಶ ಇಂಜಳ್ಳಿಕರ್, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಬಿ. ನಿಡಗುಂದಾ ಉಪಸ್ಥಿತರಿದ್ದರು. ಟ್ರಸ್ಟ್ ಅಧ್ಯಕ್ಷ ರಾಜಕುಮಾರ ಎಂ. ಕಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.