ರಾಜ್ಯ ಹೆದ್ದಾರಿ ಕಾಮಗಾರಿ ಆರಂಭ
ಕೆಂಭಾವಿ: ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಸುರಪುರ- ಹುನಗುಂದ ರಾಜ್ಯ ಹೆದ್ದಾರಿ ಕಾಮಗಾರಿ ಟೆಂಡರ್ ಪ್ರಕ್ರಿಯೆ ಸಂಪೂರ್ಣಗೊಂಡು ಕಾಮಗಾರಿ ಪ್ರಾರಂಭಗೊಳ್ಳಲಿದೆ.
ಹೆದ್ದಾರಿಯ ಮಾರ್ಗ ಮಧ್ಯೆ ಬರುವ ವಿದ್ಯುತ್ ಕಂಬ, ಕಟ್ಟಡ ಮುಂತಾದವುಗಳನ್ನು ತೆಗೆಸಬೇಕೆಂದು ಕಾರ್ಯನಿರ್ವಹಕ ಅಭಿಯಂತರ ಎಮ್.ಆರ್. ನಾಗನಗೌಡರ ಅವರು ಸಂಬಂಧಪಟ್ಟ ಗ್ರಾಮ ಪಂಚಾಯತಿಗಳಿಗೆ ಪತ್ರ ಬರೆದು ಈ ರಸ್ತೆಯು ರಾಜ್ಯ ಹೆದ್ದಾರಿಯಾಗಿದ್ದು, ಅದನ್ನು ಅಭಿವೃದ್ಧಿಪಡಿಸಲಾಗುವುದು. ಈ ರಸ್ತೆಯ ಅಗಲೀಕರಣ ಸಂದರ್ಭದಲ್ಲಿ ರಸ್ತೆಗೆ ಬೇಕಾಗುವಷ್ಟು ಜಾಗವನ್ನು ತೆರವುಗೊಳಿಸಿ, ಮತ್ತೆ ಕೆಲವು ಪ್ರದೆಶದಲ್ಲಿ ಸಣ್ಣಪುಟ್ಟ ಸ್ಥಳವು ಆಕ್ರಮಣಗೊಂಡಿರುವುದು ಕಂಡು ಬಂದಿದೆ. ಅವುಗಳನ್ನು ತೆರವುಗೊಳಿಸುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
46 ಕೋಟಿ ವೆಚ್ಚದ್ದು: ಈ ಸ್ಥಳಗಳಲ್ಲಿ ಬರುವ ಕುಡಿಯುವ ನೀರಿನ ಪೈಪುಗಳು, ವಿದ್ಯುತ್ ಕಂಬಗಳು ಇದ್ದರೆ ಅವುಗಳನ್ನು ತೆರವುಗೊಳಿಸಬೇಕೆಂದು ಪತ್ರದಲ್ಲಿ ಸೂಚಿಸಿದ್ದಾರೆ.
ಈ ಕಾಮಗಾರಿಯು 46 ಕೋಟಿ ವೆಚ್ಚದ್ದಾಗಿದ್ದು, ಡಿ.ಎನ್. ನಾಯಕ ಎಂಬ ಗುತ್ತೆದಾರರಿಗೆ ಈ ಕಾಮಗಾರಿ ಟೆಂಡರ್ ಆಗಿದೆ. ಈ ಹಿಂದೆ ಕೆಂಭಾವಿ ಪಟ್ಟಣದಲ್ಲಿ ಈ ರಸ್ತೆಯ ಅಭಿವೃದ್ಧಿಗೆ ರಸ್ತೆಯ ಮಧ್ಯದಿಂದ 75 ಅಡಿ ಮಾರ್ಕ್ ಮಾಡಿದ್ದರು.
ಇದರ ಕಾಮಗಾರಿಗೆ ಹಿಂದಿನ ಬಿಜೆಪಿ ಸರ್ಕಾರ ಗುಲ್ಬರ್ಗದಲ್ಲಿ ನಡೆದ ಸಚಿವ ಸಂಪುಟದಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾದ ನರಸಿಂಹನಾಯಕ ಹಾಗೂ ಮಾಜಿ ಶಾಸಕ ಶರಣಬಸಪ್ಪ ದರ್ಶನಾಪುರ ಒತ್ತಾಯಿಸಿ ಈ ರಸ್ತೆ ನಿರ್ಮಾಣ ಮಾಡುವುದರಿಂದ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರು ಬೆಳೆದ ಬತ್ತ, ಮೆಣಸಿನಕಾಯಿ, ಮುಂತಾದ ವಾಣಿಜ್ಯ ಬೆಳೆಗಳನ್ನು ಸಾಗಿಸಲು ಅನುಕೂಲವಾಗುತ್ತದೆ.
ಈ ರಸ್ತೆ ಸರಿ ಇಲ್ಲದ ಪ್ರಯುಕ್ತ ರೈತರು ಸುತ್ತುವರೆದು ತಿರುಗಾಡುವ ಪರಿಸ್ಥಿತಿ ಬಂದೊದಗಿತ್ತು. ಈಗ ಈ ರಸ್ತೆ ನಿರ್ಮಾಣಗೊಂಡರೆ ಪುಣೆ- ಬೆಂಗಳೂರು ಹಾಗೂ ಬೀದರ್- ಶ್ರೀರಂಗಪಟ್ಟಣ ಹೆದ್ದಾರಿಗೆ ಸೇರಲು ಅನುಕೂಲವಾಗಲಿದೆ ಎಂಬ ಸಂತಸದಲ್ಲಿ ಈ ಭಾಗದ ಜನತೆ ಇದ್ದಾರೆ.