1 ಕೋಟಿ ಮೌಲ್ಯದ ಅಕ್ರಮ ಮರಳು ಪತ್ತೆ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ಬಳಿಯ ಕಾಗಿಣಾ ನದಿಯಿಂದ ಕಳೆದ ಕೆಲವು ದಿನಗಳಿಂದ ಅಕ್ರಮವಾಗಿ ವಿವಿಧೆಡೆ ಸಂಗ್ರಹಿಸಿದ ಸುಮಾರು 1 ಕೋಟಿ ಮೌಲ್ಯದ ಮರಳನ್ನು ಸೇಡಂ ಉಪ ಆಯುಕ್ತರು ವಶಪಡಿಸಿಕೊಂಡಿದ್ದಾರೆ.
ಕೆಲ ದಿನಗಳಿಂದ ಕಾಗಿಣಾ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿರುವುದನ್ನು ಇತ್ತೀಚೆಗೆ ದಾಳಿ ನಡೆಸಿ ಜೆಸಿಬಿ, ಹಿಟಾಚಿ, ಟಿಪ್ಪರ್ಗಳನ್ನು ವಶಪಡಿಸಿಕೊಂಡ ಬೆನ್ನಲ್ಲೇ ಅಕ್ರಮವಾಗಿ ಸಂಗ್ರಹಿಸಿದ ಮರಳನ್ನು ಪತ್ತೆ ಹಚ್ಚಿ, ಪ್ರಕರಣ ದಾಖಲಿಸಲಾಗಿದೆ. ನಗರದ ಜೆಪಿ ಸಿಮೆಂಟ್ ಕಾರ್ಖಾನೆ ಆವರಣದಲ್ಲಿ, ಶಂಕರವಾಡಿ ಗ್ರಾಮದ ಬಳಿಯ ರಘೋಜಿ ಕಾರ್ಖಾನೆ, ಭಂಕೂರ ಗ್ರಾಮದ ಉರ್ದು ಶಾಲೆಯ ಆವರಣದಲ್ಲಿ ಸಂಗ್ರಹಿಸಿದ್ದ ಸುಮಾರು 1 ಕೋಟಿ ಮೌಲ್ಯದ ಮರಳನ್ನು ಸೇಡಂ ಉಪ ಆಯುಕ್ತೆ ವಿಜಯ ಜೋತ್ಸಾ, ಉಪ ಆಯುಕ್ತರ ಕಚೇರಿಯ ತಹಸೀಲ್ದಾರ್ ದಯಾನಂದ ಪಾಟೀಲ್, ಚಿತ್ತಾಪುರ ತಹಸೀಲ್ದಾರ್ ಮಲ್ಲೇಶಿ ತಂಗಾ, ಪ್ರಭಾರಿ ಡಿವೈಎಸ್ಪಿ ಉದಯಕುಮಾರ ಬೇವಿನಮರದ, ಶಹಾಬಾದ್ ಎಸ್ಐ ಎಸ್.ಎಸ್. ಹುಲ್ಲೂರ, ಲೋಕೋಪಯೋಗಿ ಇಲಾಖೆ ಅಧಿಕಾರಿ ಇಸ್ಮಾಯಿಲ್ ಪಟೇಲ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಉಪ ಆಯುಕ್ತರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಒಟ್ಟು ಮೂರು ಸ್ಥಳದಲ್ಲಿ ಸಂಗ್ರಹಿಸಿದ ಅಕ್ರಮ ಮರಳಿನ ಮೌಲ್ಯವನ್ನು ನಿರ್ಧರಿಸಲು ಆದೇಶಿಸಿದ್ದಾರೆ. ಈ ಪ್ರಕರಣವನ್ನು ಶಹಾಬಾದ್ ನಗರ ಠಾಣೆಯಲ್ಲಿ ದಾಖಲಿಸಲಾಗಿದೆ.