ಇದು ಭೀಮಾ 'ತೀರದ' ದಾಹ
ಬರಿದಾದ ನದಿಪಾತ್ರಕ್ಕೆ ನೀರು ಹರಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡುವಲ್ಲಿಯೂ ನಮ್ಮನ್ನಾಳುವವರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆಯೆ?...
ಕ.ಪ್ರ. ವಾರ್ತೆ, ಗುಲ್ಬರ್ಗ, ಮೇ 27
ಬರಿದಾದ ನದಿಪಾತ್ರಕ್ಕೆ ನೀರು ಹರಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡುವಲ್ಲಿಯೂ ನಮ್ಮನ್ನಾಳುವವರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆಯೆ?
ಏಕೆಂದರೆ ಬತ್ತಿಹೋಗಿರುವ ಕೃಷ್ಣಾ ನದಿಗೆ 2 ಟಿಎಂಸಿ ನೀರು ಬಿಡುವಂತೆ ಸರ್ಕಾರ ಮಾಡಿರುವ ಮನವಿಗೆ ಸ್ಪಂದಿಸಿ ಮಹಾರಾಷ್ಟ್ರ ಸರ್ಕಾರ 1.5 ಟಿಎಂಸಿ ನೀರನ್ನು ಹರಿಸಿದೆ. ಆದರೆ ಕಳೆದ ಎರಡು ವರ್ಷಗಳಿಂದ ಮಳೆ ಇಲ್ಲದೆ ಕೃಷ್ಣೆಯ ಉಪನದಿ ಭೀಮೆಯೂ ಬತ್ತಿ ಬರಿದಾಗಿದೆ. ಈ ಸಂಗತಿ ಎಲ್ಲರಿಗೂ ಗೊತ್ತಿದ್ದರೂ ಯಾರೊಬ್ಬರೂ ಭೀಮಾ ನದಿಗೂ ನೀರು ಹರಿಬಿಡಲು ಕ್ರಮ ಕೈಗೊಳ್ಳುತ್ತಿಲ್ಲ.
ಮಹಾರಾಷ್ಟ್ರದಲ್ಲಿ 2 ಅಣೆಕಟ್ಟೆಗಳು: ಮಹಾರಾಷ್ಟ್ರದ ಪುಣೆ ಸಮೀಪದ ಭೀಮೇಶ್ವರ ಬೆಟ್ಟದ ತಪ್ಪಲು ಪ್ರದೇಶದಲ್ಲಿ ಹುಟ್ಟಿ ಕರ್ನಾಟಕದ ಮೂಲಕ ಸಾಗಿಹೋಗಿ ಯಾದಗಿರಿ ಬಳಿ ಕೃಷ್ಣೆಗೆ ಸೇರುವ ಭೀಮಾನದಿಗೆ ಮಹಾರಾಷ್ಟ್ರದಲ್ಲೇ 2 ಕಡೆ ಅಣೆಕಟ್ಟೆಗಳನ್ನು ನಿರ್ಮಿಸಲಾಗಿದೆ.
ಪುಣೆ ಬಳಿಯ ಉಜನಿ ಹತ್ತಿರ ಹಾಗೂ ಅಲ್ಲೇ ವೀರಭಟ್ಕರ್ ಹತ್ತಿರ 2 ಜಲಾಶಯಗಳನ್ನು ನಿರ್ಮಿಸಿ ಭೀಮೆಯ ಸಾಕಷ್ಟು ನೀರನ್ನು ಸಂಗ್ರಹಿಸಲಾಗಿದೆ. ಕೇಂದ್ರ ಜಲ ಆಯೋಗದ (ಸಿಡಬ್ಲೂಸಿ) ಪರವಾನಗಿ ಇಲ್ಲದೆಯೇ ನದಿ ಪಾತ್ರಕ್ಕೆ ಭೀಮೆಯನ್ನು ಜೋಡಿಸಿ ಅಕಲೂಜ್ ಸೇರಿದಂತೆ ಸೊಲ್ಲಾಪುರ ಜಿಲ್ಲೆಯ 6 ತಾಲೂಕುಗಳಲ್ಲಿ ನೀರಾವರಿ ಯೋಜನೆಯನ್ನೂ ಮಹಾರಾಷ್ಟ್ರ ಸರ್ಕಾರ ಅನುಷ್ಠಾನಕ್ಕೆ ತಂದಿದೆ.
ತನ್ನ ಪಾಲಿಗೆ ಹಂಚಿಕೆಯಾಗಿರುವ ನೀರಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಮಹಾರಾಷ್ಟ್ರ ಬಳಸುತ್ತಿದ್ದರೂ ನಮ್ಮ ಸರ್ಕಾರ ಏಕೆಂದು ಕೇಳುವ ಧೈರ್ಯ ಮಾಡಿಲ್ಲ. ಸಾಲದ್ದಕ್ಕೆ ಮಹಾರಾಷ್ಟ್ರ ಸರ್ಕಾರ ಕೇಳಿದಾಗೆಲ್ಲ (ಸೊಲ್ಲಾಪುರ ಸಿದ್ದೇಶ್ವರ ಜಾತ್ರೆ ಇತ್ಯಾದಿ ಸಂದರ್ಭ) ಕೃಷ್ಣೆಯ ನೀರನ್ನು (ನಾರಾಯಣಪುರ ಜಲಾಶಯದಿಂದ) ಭೀಮಾನದಿಗೆ ಹರಿಸುತ್ತಲೇ ಇದೆ.
ಭೀಮೆಯ ಒಡಲು ತುಂಬುವುದೆ?: ಇದೀಗ ಕಳೆದ 3 ತಿಂಗಳಿಂದ ಭೀಮಾನದಿ ಸಂಪೂರ್ಣ ಬತ್ತಿಹೋಗಿದೆ. ಈ ನದಿಯನ್ನೇ ನಂಬಿರುವ ಬಿಜಾಪುರ, ಗುಲ್ಬರ್ಗ, ಯಾದಗಿರಿ ಜಿಲ್ಲೆಗಳ ಹತ್ತಾರು ತಾಲೂಕುಗಳ ಲಕ್ಷಾಂತರ ಜನ-ಜಾನುವಾರಗಳು ಹೈರಾಣಾಗಿವೆ. ನದಿ ಪಾತ್ರವೇ ಬತ್ತಿ ಹೋಗಿದ್ದರಿಂದ ಅಲ್ಲಿನ ಪರಿಸರ, ಜಲಚರಗಳೆಲ್ಲವೂ ನಾಶವಾಗಿವೆ.
ನದಿ ಪಾತ್ರದಲ್ಲಿ ಇಂಥ ಹಾಹಾಕಾರವಿರುವ ನೋಟ ಕಂಡರೂ ನಮ್ಮನ್ನಾಳುವವರಿಗೆ ಕೃಷ್ಣಾ ನದಿಯೊಂದೇ ಖಾಲಿಯಾಗಿರುವ ಸಂಗತಿ ಅರಿವಿಗೆ ಬಂತೇ ಹೊರತು ಭೀಮಾ ನದಿ ಬತ್ತಿ ಹೋಗಿರುವುದ ಗಮನಕ್ಕೇ ಬರಲಿಲ್ಲ.
ಹಿಂದಿನ ಬಿಜೆಪಿ ಸರ್ಕಾರ ಭೀಮಾ ನದಿಗೂ ನೀರು ಹರಿಸುವಂತೆ ಮಹಾರಾಷ್ಟ್ರ ಸರ್ಕಾರವನ್ನು ಕೋರಿತ್ತು. ಆದರೆ ಆಗಲೂ ಹನಿ ನೀರು ಹರಿದಿರಲಿಲ್ಲ. ಕಳೆದ ವರ್ಷವೂ ಮಹಾರಾಷ್ಟ್ರದಿಂದ ಕೃಷ್ಣೆಗೆ ನೀರು ಹರಿದು ಬಂತೇ ಹೊರತೂ ಭೀಮೆಗೆ ಬರಲೇ ಇಲ್ಲ. ಈ ಬಾರಿಯೂ ಸರ್ಕಾರ ಭೀಮಾನದಿ ಬತ್ತಿ ಹೋದರೂ ಲಕ್ಷವಹಿಸುತ್ತಿಲ್ಲ.
ಈಗಲಾದಾರೂ ಸರ್ಕಾರ ಕೃಷ್ಣಾ ತೀರದ ಜನರ ಬೇಡಿಕೆಗೆ ಸ್ಪಂದಿಸಿದಂತೆ ಭೀಮಾ ತೀರದ ಜನರ ಮನವಿಗೂ ಸ್ಪಂದಿಸಿ ಮಹಾರಾಷ್ಟ್ರದಿಂದ ಭೀಮೆಗೆ ನೀರು ಹರಿದು ಬರುವಂತೆ ಕ್ರಮ ಜರುಗಿಸಬೇಕಾಗಿದೆ. ಈ ಕೆಲಸ ತುರ್ತಾಗಿ ಆಗುವುದೆ ಎಂದು ನದಿ ತೀರದ ಜನತೆ ಕಾದು ನೋಡುತ್ತಿದ್ದಾರೆ.
- ಶೇಷಮೂರ್ತಿ ಅವಧಾನಿ