ಕ್ಷೇತ್ರದ ಸಮಸ್ಯೆ ಅರಿಯಲು ಸಾಕ್ಷ್ಯಚಿತ್ರ
ಕನ್ನಡಪ್ರಭ ವಾರ್ತೆ, ಚಿಂಚೋಳಿ, ಮೇ 27
ಚಿಂಚೋಳಿ ತಾಲೂಕು ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಗ್ರಾಮಗಳಲ್ಲಿರುವ ಮೂಲ ಸೌಕರ್ಯಗಳ ಕೊರತೆ ಮತ್ತು ಹಳ್ಳಿಯ ಸ್ಥಿತಿಗತಿಯ ಕುರಿತು ಸಮಗ್ರ ಸಾಕ್ಷ್ಯ ಚಿತ್ರವನ್ನು ಸಿದ್ಧಪಡಿಸಲು ಖಾಸಗಿ ಸಂಸ್ಥೆಗೆ ವಹಿಸಿ ಕೊಡಲಾಗಿದೆ ಎಂದು ಶಾಸಕ ಡಾ. ಉಮೇಶ ಜಾಧವ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನರ ಅಪೇಕ್ಷೆಯಂತೆ ಅಲ್ಲಿನ ಸ್ಥಿತಿಗತಿಯ ಸಾಕ್ಷ್ಯಚಿತ್ರವನ್ನು ನಿರ್ಮಿಸಲು ಬೀದರ್ ನಗರದ ಶಾನ್ ವಿಡಿಯೋ ಮೂವಿಗೆ ವಹಿಸಿಕೊಡಲಾಗಿದೆ ಎಂದರು.
ಇಂದಿನಿಂದ ಚಿತ್ರೀಕರಣ: ತಾಲೂಕಿನ ಅನೇಕ ಗ್ರಾಮಗಳಲ್ಲಿ ರಸ್ತೆ, ಕುಡಿಯುವ ನೀರು, ಶಾಲೆ ಕಟ್ಟಡ, ಶಿಕ್ಷಣದ ಗುಣಮಟ್ಟ ಸುಧಾರಿಸುವುದು, ಸಾರಿಗೆ ಸಂಪರ್ಕ, ಸಣ್ಣ ನೀರಾವರಿ ಸಮಸ್ಯೆ, ಆರೋಗ್ಯ, ನೈಸರ್ಗಿಕವಾಗಿರುವ ಪರಿಸರ ಸಂರಕ್ಷಣೆ ಮತ್ತು ಇನ್ನಿತರ ಮೂಲ ಸೌಕರ್ಯಗಳ ಬಗ್ಗೆ ಸಾಕ್ಷ್ಯ ಚಿತ್ರವನ್ನು ಮೇ 28ರಂದು ಪ್ರಾರಂಭಿಸಿ ಒಟ್ಟು 10 ದಿನಗಳವರೆಗೆ ವಿವಿಧ ಗ್ರಾಮಗಳಲ್ಲಿ ಸಮಸ್ಯೆಗಳ ಬಗ್ಗೆ ಚಿತ್ರೀಕರಣಗೊಳಿಸಲಾಗುವುದು ತಿಳಿಸಿದರು.
ಕೇಂದ್ರ ಕಾರ್ಮಿಕ ಸಚಿವ ಎಂ.ಮಲ್ಲಿಕಾರ್ಜುನ ಖರ್ಗೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ನಗರಾಭಿವೃದ್ಧಿ ಸಚಿವ ಖಮರುಲ್ ಇಸ್ಲಾಂ, ಜವಳಿ ಸಚಿವ ಬಾಬುರಾವ ಚಿಂಚನಸೂರ ಅವರ ಮಾರ್ಗದರ್ಶನದಂತೆ ತಾಲೂಕಿನಲ್ಲಿ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು ಎಂದರು.
ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ: ತಾಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಿದೆ. ಇಡೀ ತಾಲೂಕಿಗೆ ನೀರು ಸರಬರಾಜು ಮಾಡುವಂತಹ ಸಾಮರ್ಥ್ಯವಿದ್ದರೂ ನೀರು ಸದುಪಯೋಗವಾಗಿಲ್ಲ. ಇಲ್ಲಿನ ಜನರ ಆರ್ಥಿಕ ಮಟ್ಟದ ಸುಧಾರಣೆಯಲ್ಲಿಯೂ ದೌರ್ಜನ್ಯ ಎಸಗಿದಂತಾಗಿದೆ. ಜನರು ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ನನ್ನ ಮೇಲೆ ಅತಿಯಾದ ವಿಶ್ವಾಸವನ್ನಿಟ್ಟುಕೊಂಡು ಗೆಲ್ಲಿಸಿದ್ದಾರೆ ಎಂದರು.
ಚಿಂಚೋಳಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾಳಗಿ ಬಸ್ ನಿಲ್ದಾಣದಲ್ಲಿ ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಸೆಲ್ಟರ್ ಇಲ್ಲ. ಇಂತಹ ಸಮಸ್ಯೆಗಳನ್ನು ಹೊಂದಿರುವ ಬಗ್ಗೆ ಸಮಗ್ರ ಸ್ಥಿತಿಗತಿಯ ಬಗ್ಗೆ ಚಿತ್ರೀಕರಿಸಿಕೊಳ್ಳಲಾಗುವುದು ಎಂದರು.
ಪಪಂ ಸದಸ್ಯ ರಾಮಶೆಟ್ಟಿ ಪವಾರ, ಮೇಘರಾಜ ರಾಠೋಡ, ವೀರಶೆಟ್ಟಿ ಭೈರ್, ಆರ್. ಗಣಪತರಾವ ಇತರರು ಇದ್ದರು.