ಮಠ- ಮಾನ್ಯಗಳ ಭೇಟಿಯಿಂದ ನೆಮ್ಮದಿ ಸಾಧ್ಯ: ಪಡುಕೋಟಿ
ಸುರಪುರ: ಜಂಜಾಟದ ಬದುಕಿನಲ್ಲಿ ಬದುಕುತ್ತಿರುವ ನಮಗೆ ನೆಮ್ಮದಿ, ಶಾಂತಿ, ಸಹನೆ ಇಲ್ಲದಂತಾಗಿದೆ. ಆ ನಿಟ್ಟಿನಲ್ಲಿ ಮಠ- ಮಾನ್ಯಗಳಿಗೆ ಭೇಟಿ ಕೊಡುವುದರಿಂದ ಬದುಕಿನಲ್ಲಿ ನೆಮ್ಮದಿ ಪಡೆಯಲು ಸಾಧ್ಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಬಸವರಾಜ ಪಡುಕೋಟಿ ನುಡಿದರು. 12ನೇ ಶತಮಾನ ಶಿವಶರಣ ಕುರಿತು ಉಪನ್ಯಾಸ ನೀಡಿದ ಪ್ರಕಾಶ ಅಂಗಡಿ, 12ನೇ ಶತಮಾನ ಜಗತ್ತಿನಲ್ಲಿಯೇ ಸುವರ್ಣಯುಗ, ಈ ಶತಮಾನ ಶೋಷಣೆಗೊಳಗಾದ ಅನೇಕ ಸಮುದಾಯಗಳಿಗೆ ಮೊದಲ ಸ್ವಾತಂತ್ರ್ಯ ಸಿಕ್ಕ ಯುಗ. ಅನುಭವ ಮಂಟಪ ಎಂಬ ಜಗತ್ತಿನ ಮೊದಲ ಸಂಸತ್ತನ್ನು ಪರಿಚಯಿಸಿದ ಕೀರ್ತಿ ಬಸವಣ್ಣಗೆ ಸಲ್ಲುತ್ತದೆ ಎಂದರು.
ಉತ್ತಮ ಫಲಿತಾಂಶ
ಬೀದರ್: ಸಿಬಿಎಸ್ಇ 10ನೇ ತರಗತಿಗೆ ನಡೆದ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ನಗರದ ದತ್ತಗಿರಿ ಮಹಾರಾಜ ಪಬ್ಲಿಕ್ ಶಾಲೆಯ ಇಬ್ಬರು ವಿದ್ಯಾರ್ಥಿಗಳು 100ಕ್ಕೆ ನೂರು ಅಂಕ ಗಳಿಸಿ ಸಾಧನೆ ಮೆರೆದಿದ್ದಾರೆ. ವಿದ್ಯಾರ್ಥಿಗಳಾದ ರೇಣುಕಾ ರಮೇಶ್ ಹಾಗೂ ಸಚೀನ್ ಸೂರ್ಯಕಾಂತ್ ಎಲ್ಲ ವಿಷಯಗಳಲ್ಲಿ 100 ಅಂಕ ಗಳಿಸಿ ಸಾಧನೆಗೈದಿದ್ದಾರೆ. 15 ವಿದ್ಯಾರ್ಥಿಗಳು ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. 20 ವಿದ್ಯಾರ್ಥಿಗಳು ಶೇ.80, 5 ವಿದ್ಯಾರ್ಥಿಗಳು ಶೇ.70 ಹಾಗೂ ಅಗ್ರಶ್ರೇಣಿಯಲ್ಲಿ 26 ವಿದ್ಯಾರ್ಥಿಗಳು ಮತ್ತು 14 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕರಾದ ಅವಧೂತಗಿರಿ ಮಹಾರಾಜ, ಅಧ್ಯಕ್ಷ ಸಂಗಯ್ಯಾ ರೇಜಂತಲ್, ಪ್ರಭಾಕರ್ ಮೈಲಾಪೂರೆ, ರಮೇಶ ದುಕಾನದಾರ್, ಅನೀಲಕುಮಾರ, ಶಿವರಾಜ ಪಾಟೀಲ್, ರವಿಶಂಕರ ಮಲಸಾ, ಬಸವರಾಜ, ಸತವಿಂದರ್, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಜ್ಞಾನಸುಧಾ ಉತ್ತಮ ಸಾಧನೆ
ಬೀದರ್: ನಗರದ ಪ್ರತಿಷ್ಠಿತ ಜ್ಞಾನ ಸುಧಾ ವಿದ್ಯಾಲಯದ ವಿದ್ಯಾರ್ಥಿಗಳು ಸಿಬಿಎಸ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅದ್ಭುತ ಸಾಧನೆಗೈದಿದ್ದಾರೆ. ಶಾಲೆಗೆ ಶೇ.100ಕ್ಕೆ 100 ಫಲಿತಾಂಶ ನೀಡುವುದಲ್ಲದೇ ವೈಯಕ್ತಿಕವಾಗಿಯೂ ಒಳ್ಳೆಯ ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಶಾಲೆಯ ಇಬ್ಬರು ವಿದ್ಯಾರ್ಥಿಗಳು ಶೇ.95ರಷ್ಟು ಅಂಕ ಪಡೆದು ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 11 ವಿದ್ಯಾರ್ಥಿಗಳು ಶೇ.75ರಿಂದ 80ರಷ್ಟು ಅಂಕ ಪಡೆದರೆ 5 ವಿದ್ಯಾರ್ಥಿಗಳು ಶೇ.60ರಿಂದ 70ರಷ್ಟು ಹಾಗೂ 2 ವಿದ್ಯಾರ್ಥಿಗಳು ಶೇ.70ರಿಂದ 60ರಷ್ಟು ಅಂಕ ಪಡೆದಿದ್ದಾರೆ. ಶಾಲೆಯ ಎಲ್ಲ ವಿದ್ಯಾರ್ಥಿಗಳು ಅಗ್ರ ಶ್ರೇಣಿ ಮತ್ತು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳು ಸಾಧನೆಗೆ ಮುಖ್ಯಗುರುಗಳು, ಶಿಕ್ಷಕರು ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ. ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಅವಿರತ ಪರಿಶ್ರಮವೇ ಒಳ್ಳೆಯ ಫಲಿತಾಂಶ ಬರಲು ಕಾರಣವೆಂದು ಅಧ್ಯಕ್ಷೆ ಪ್ರೊ. ಪೂರ್ಣಿಮಾ ಹಾಗೂ ಆಡಳಿತ ಮಂಡಳಿ ಅಭಿನಂದಿಸಿದೆ.