ಹಣ, ಹೆಂಡ, ಮತಯಂತ್ರ ದೋಷದಿಂದ ಸೋಲಾಯ್ತು: ಜೆಡಿಎಸ್ನ ಮುಕ್ರಂಖಾನ್
ಕನ್ನಡಪ್ರಭ ವಾರ್ತೆ, ಸೇಡಂ, ಮೇ 27
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹಣ, ಹೆಂಡ, ಮತ ಯಂತ್ರಗಳ ಲೋಪದೋಷದಿಂದ ಸೋಲು ಕಾಣಬೇಕಾಯಿತು ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಕ್ರಂಖಾನ್ ಹೇಳಿದರು.
ಬಟಗೇರಾದಲ್ಲಿ ನಡೆದ ಜೆಡಿಎಸ್ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿ, ಈ ಹಿಂದಿನ ಐದು ವರ್ಷದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಮುಂದಿನ ಚುನಾವಣೆಗೆ ಸನ್ನದ್ಧರಾಗಿರುವುದಾಗಿ ಹೇಳಿದರು.
ಕಾಂಗ್ರೆಸ್ನಿಂದ ಹಣ- ಹೆಂಡ ಹಂಚಿಕೆ: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಬಲ ಸಾಬೀತುಪಡಿಸಲು ಮುಂದಾಗಬೇಕು. ಕಾಂಗ್ರೆಸ್ ಪಕ್ಷವು ಚುನಾವಣೆಯ ಮುನ್ನಾ ದಿನ ಹಣ, ಹೆಂಡ ಹಂಚುವ ಮೂಲಕ ಮತದಾರರನ್ನು ತಪ್ಪು ದಾರಿಗೆ ಎಳೆದು, ಅನ್ಯಾಯದ ಮೂಲಕ ಜಯ ಗಳಿಸಿದೆ ಎಂದ ಆರೋಪಿಸಿದರು.
ತಾವು ಕಂಪನಿಗಳಿಂದ ಹಣ ಪಡೆದಿರುವುದಾಗಿ ಕಾಂಗ್ರೆಸ್ ಆರೋಪಿಸಿತ್ತು, ಒಂದು ವೇಳೆ ತಾನು ಹಣ ಪಡೆದಿದ್ದು ಖಚಿತಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದರು. ಮುಖಂಡ ಸತೀಶರೆಡ್ಡಿ ಪಾಟೀಲ್ ರಂಜೋಳ ಮಾತನಾಡಿ, ಹಣ ಹಂಚಿಕೆ ಮತ್ತು ಜಾತಿ ವಿಷ ಬೀಜ ಬಿತ್ತುವ ಮೂಲಕ ತಮ್ಮ ಪಕ್ಷಕ್ಕೆ ಕೆಲ ಆಗದ ಕೈಗಳು ಧಕ್ಕೆ ತಂದಿದ್ದಾರೆ ಎಂದರು.
ಮುಖಂಡರಾದ ನರಸೋಜಿ, ವೀರಣ್ಣ ಮಾಸ್ತರ ಕೆರಳ್ಳಿ, ಅಶೋಕ ದಂಡೋತಿ, ವೀರಯ್ಯಸ್ವಾಮಿ, ಹಣಮಂತು ಸೇರಿದಂತೆ ಅನೇಕರು ತಮ್ಮ ಅಭಿಪ್ರಾಯ ತಿಳಿಸಿದರು.
ಈ ಸಂದರ್ಭದಲ್ಲಿ ಹಣಮಂತರೆಡ್ಡಿ ಮಲ್ಲಾಬಾದ, ವೀರಯ್ಯಸ್ವಾಮಿ, ಮಲ್ಲಿಕಾರ್ಜುನ ರೆಡ್ಡಿ ಕೋಲಕುಂದ, ಭೀಮಶಪ್ಪ ಮೇದಕ, ತಿಪ್ಪಣ್ಣ ನಾಡೇಪಲ್ಲಿ, ಪುರಸಭೆ ಸದಸ್ಯರಾದ ಅಯ್ಯುಬ್ ಅಲಿ ಜಿಗರ್, ಅಜೀಮ ಹಾಗೂ ದೇವಿಂದ್ರಪ್ಪ ಸಜ್ಜನ, ಸುಭಾಷ ಮಹಾಡಿಕ, ದೇವಿಂದ್ರ ಎಳ್ಳಿ, ಕಾಶಿನಾಥ ನಾಟಿಕಾರ್ ಇದ್ದರು.