ಅವಘಡ; ಶವವಿಟ್ಟು ಪ್ರತಿಭಟನೆ
ಗುಲ್ಬರ್ಗ: ನಗರದ ಜಗತ್ ಬಡಾವಣೆಯ ಗೊಲ್ಲರ ಗಲ್ಲಿಯಲ್ಲಿ ಸೋಮವಾರ ರಾತ್ರಿ ವಿದ್ಯುತ್ ಶಾಕ್ನಿಂದ ವೀರೇಶ ಎಂಬ 18 ವರ್ಷದ ಯುವಕ ಮೃತಪಟ್ಟಿದ್ದು, ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಮೃತನ ಕುಟುಂಬದವರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಮಹಾನಗರ ಪಾಲಿಕೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತ ಹರ್ಷಾ ಶೆಟ್ಟಿ ಅವರು, ಮೃತನ ಕುಟುಂಬದವರಿಗೆ ತಕ್ಷಣವಾಗಿ ಪರಿಹಾರವಾಗಿ 25 ಸಾವಿರ ವಿತರಿಸಿ, ಜಿಲ್ಲಾಧಿಕಾರಿಗಳು ನಗರಕ್ಕೆ ಆಗಮಿಸಿದ ನಂತರ ಅವರೊಂದಿಗೆ ಚರ್ಚಿಸಿ ಹೆಚ್ಚಿನ ಪರಿಹಾರ ನೀಡುವ ಕುರಿತು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಮೃತನ ಕುಟುಂಬದ ಸದಸ್ಯರು, ಬಿಎಸ್ಪಿ, ಜೈ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
25 ಲಕ್ಷ ಪರಿಹಾರಕ್ಕೆ ಒತ್ತಾಯ: ವಿದ್ಯಾರ್ಥಿ ವೀರೇಶ ತಂದೆ ಶಿವಶರಣಪ್ಪ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದು, ಆತನ ಸಾವಿಗೆ ಮಹಾನಗರ ಪಾಲಿಕೆ ಮತ್ತು ಜೆಸ್ಕಾಂ ಕಾರಣವಾಗಿದೆ. ಕೂಡಲೇ ಆತನ ಕುಟುಂಬಕ್ಕೆ 25 ಲಕ್ಷ ರು. ಪರಿಹಾರ ನೀಡಬೇಕು ಎಂದು ಬಹುಜನ ಸಮಾಜ ಪಕ್ಷ ಒತ್ತಾಯಿಸಿದೆ.
--
ದಂಡೋತಿ ಗ್ರಾಮದ ಬಳಿ ಕ್ರೂಸರ್-ಬೈಕ್ ಡಿಕ್ಕಿ: ಒಬ್ಬ ಸಾವು
ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದ ಬಳಿ ಕ್ರೂಸರ್ ಮತ್ತು ಬೈಕ್ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ದಂಡೋತಿ ಗ್ರಾಮದ ಸೋಮಶೇಖರ ಸಜ್ಜನಶೆಟ್ಟಿ ಮೃತರು. ಗ್ರಾಮದ ಶರಣಬಸವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷರಾಗಿ ಹಾಗೂ ಹಲವು ವರ್ಷ ಕಾಂಗ್ರೆಸ್ನಲ್ಲಿ ಮುಖಂಡರಾಗಿ ಸೇವೆ ಸಲ್ಲಿಸಿದ್ದರು. ಸ್ವ ಗ್ರಾಮದಿಂದ ತೆಂಗಳಿ ಕ್ರಾಸ್ ಕಡೆಗೆ ಬೈಕ್ ಮೇಲೆ ತೆರಳುತ್ತಿದ್ದಾಗ ಎದುರಿನಿಂದ ಬಂದ ಕ್ರೂಸರ್ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದಿನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟಿದ್ದಾರೆ.
ಮೃತರ ಅಂತ್ಯಕ್ರಿಯೆ ಸೋಮವಾರ ದಂಡೋತಿ ಗ್ರಾಮದಲ್ಲಿ ಜರುಗಿತು. ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೋಕ: ಸೋಮಶೇಖರ ಸಜ್ಜನಶೆಟ್ಟಿ ಅವರ ಸಾವಿಗೆ ತಾಲೂಕು ವೀರಶೈವ ಸಮಾಜ ಅಧ್ಯಕ್ಷ ಚಂದ್ರಶೇಖರ ಅವಂಟಿ, ಮುಖಂಡರಾದ ಚಂದ್ರಶೇಖರ ಸಜ್ಜನಶೆಟ್ಟಿ, ಮಡಿವಾಳಪ್ಪ ರೇಷ್ಮಿ, ಪ್ರಭುದೇವ ಬಮ್ಮನಳ್ಳಿ, ಭೀಮರಾವ ತೋಟದ, ರಾಜಶೇಖರ ತಿಮ್ಮನಾಯಕ, ಬಿಕ್ಷಪ್ಪ ಕಲಶೆಟ್ಟಿ, ಶಿವಲಿಂಗ ಸಜ್ಜನ್, ಶಾಲೆ ಆಡಳಿತ ಮಂಡಳಿ ಹಾಗೂ ಸದಸ್ಯರು ಶೋಕ ವ್ಯಕ್ತಪಡಿಸಿದ್ದಾರೆ.