ಐಪಿಎಲ್ ಬೆಟ್ಟಿಂಗ್ ದಂಧೆಯ ನಗ-ನಾಣ್ಯ ಜಪ್ತಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 28
ಐಪಿಎಲ್ ಬೆಟ್ಟಿಂಗ್‌ನಲ್ಲಿ ತೊಡಗಿಸಿದ್ದ ಭಾರೀ ಪ್ರಮಾಣದ ಹಣವನ್ನು ಬೀದರ್‌ನಿಂದ ಗುಲ್ಬರ್ಗ ಕಡೆಗೆ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಗುಲ್ಬರ್ಗ ಪೊಲೀಸರು ಮಂಗಳವಾರ ಬೆಳಗ್ಗೆ ಮೂವರನ್ನು ಬಂಧಿಸಿ, ಅವರಿಂದ 31 ಲಕ್ಷ ಮೌಲ್ಯದ ನಗ- ನಾಣ್ಯ ಮತ್ತು ಟವೇರಾ ವಾಹನ ಜಪ್ತಿ ಮಾಡಿದ್ದಾರೆ.
ಜಿಲ್ಲೆಯ ಶಹಾಬಾದ್‌ನ ಸುನೀಲ್ ಗರ್ಜೆ, ಸಚಿನ ನವಲೆ ಮತ್ತು ಯಾದಗಿರಿ ಜಿಲ್ಲೆ ಶಹಾಪುರ ತಾಲೂಕು ಭೀಮರಾಯನಗುಡಿಯ ಮಂಜುನಾಥ ಪಾಣಿ ಬಂಧಿತರು. ಮುಖ್ಯ ಆರೋಪಿ ಅನೀಲ್ ಗರ್ಜೆ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಮೂವರು ಸೇರಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಟ್ಟಿಂಗ್‌ನಿಂದ ಬಂದ ಲಾಭದ ಹಣವನ್ನು ಗೋವಾದಿಂದ ಬೀದರ್ ಮೂಲಕ ಗುಲ್ಬರ್ಗಕ್ಕೆ ಸಾಗುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಮಂಗಳವಾರ ಬೆಳಗಿನ ಜಾವ 5ರ ಸುಮಾರಿಗೆ ತಾವರಗೇರಾ ಕ್ರಾಸ್ ಹತ್ತಿರ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಪ್ತಿ ಮಾಡಿದ ವಸ್ತುಗಳು: ಬಂಧಿತರಿಂದ ನಗದು 20 ಲಕ್ಷ, 10 ಗ್ರಾಂ.ನ ಎರಡು ಬಂಗಾರದ ಬಿಸ್ಕತ್‌ಗಳು, 30 ಗ್ರಾಂ ಬ್ರಾಸ್‌ಲೇಟ್, 10 ಗ್ರಾಂ ಮತ್ತು 3 ಗ್ರಾಂ.ನ 2 ಸುತ್ತುಂಗುರ, ಟವೇರಾ ವಾಹನ, ಮೂರು ಮೊಬೈಲ್ ಸೇರಿದಂತೆ ಒಟ್ಟು 31.11 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಹೀಗೆ ನಡೆದಿತ್ತು ದಂಧೆ..: ತಲೆಮರೆಸಿಕೊಂಡಿರುವ ಮುಖ್ಯ ಆರೋಪಿ ಅನೀಲ್ ತಂದೆ ನಾಗನಾಥ ಗರ್ಜೆ ಎಂಬಾತ ಗೋವಾದಲ್ಲಿ ಕುಳಿತುಕೊಂಡು ಬೆಟ್ಟಿಂಗ್ ದಂಧೆ ನಡೆಸುತ್ತಿದ್ದು, ಆತನ ತಮ್ಮ ಸುನೀಲ್ ಗರ್ಜೆ ಎಂಬಾತ ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ವಿವಿಧೆಡೆ ಸಂಚರಿಸಿ ಬೆಟ್ಟಿಂಗ್ ಕಟ್ಟಿಕೊಂಡು ಅಣ್ಣ ಅನೀಲ್‌ಗೆ ನೀಡಿ ಬೆಟ್ಟಿಂಗ್‌ನಿಂದ ಬಂದ ಹಣವನ್ನು ಸಾಗಿಸುತ್ತಿದ್ದನು ಎನ್ನಲಾಗಿದೆ.
ಗುಲ್ಬರ್ಗ ಎಸ್ಪಿ, ಅಪರ ಎಸ್ಪಿ, ಗ್ರಾಮೀಣ ಉಪ ವಿಭಾಗದ ಡಿಎಸ್ಪಿ ಅವರ ಮಾರ್ಗದರ್ಶನದಲ್ಲಿ ಗ್ರಾಮೀಣ ಸಿಪಿಐ ಕೆ.ಎಸ್. ಸತೀಶ ನೇತೃತ್ವದಲ್ಲಿ ಗ್ರಾಮೀಣ ಠಾಣೆಯ ಪಿಎಸ್‌ಐ ಆನಂದರಾವ, ಬಾಪುಗೌಡ ಎಸ್. ಪಾಟೀಲ್, ಸಿಬ್ಬಂದಿ ಹಣಮಂತ ನವಲೆ, ನರಸಿಂಹ ಚಾರಿ, ಸಂಜೀವ ರೆಡ್ಡಿ, ದತ್ತಾತ್ರೇಯ ಕಮಲಾಪುರಕರ್, ಶಿವಶರಣಪ್ಪ ಮಂಗಲಗಿ, ಕಲ್ಯಾಣಿ, ರಾಜು ಗಂದೆ, ಹುಸೇನ ಭಾಷಾ, ರಮೇಶ, ಬಂಡೆಪ್ಪ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತೀಶಕುಮಾರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶಂಸಿದರು.