ಖಾಲಿಯಾಗದ ಮುದನೂರು ತೀರ್ಥ
ಕನ್ನಡಪ್ರಭ ವಾರ್ತೆ ಕೆಂಭಾವಿ ಮೇ 28
ಜಿಲ್ಲೆಯ ಸುರಪುರ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಯಾತ್ರಾಸ್ಥಳ ಮುದನೂರು ಗ್ರಾಮದ ಬಾವಿಯಿಂದ ನೀರು ಖಾಲಿ ಮಾಡುವುದೇ ಈಗ ದೊಡ್ಡ ಸಮಸ್ಯೆಯಾಗಿದೆ.
11ನೇ ಶತಮಾನದ ವಚನಕಾರ ದೇವರ ದಾಸಿಮಯ್ಯನವರು ನೆಲೆಸಿದ ಗ್ರಾಮ ಈ ಮುದನೂರು. ಮುದನೂರಿನಲ್ಲಿ ಗತ ಇತಿಹಾಸ ಸಾರುವ ಸಪ್ತ ತೀರ್ಥಗಳಿದ್ದು(ಬಾವಿ), ಅನೇಕ ವರ್ಷಗಳಿಂದ ಅಭಿವೃದ್ಧಿಗೊಳಿಸದೇ ನಿರ್ಲಕ್ಷ್ಯಕ್ಕೆ ಒಳಪಟ್ಟಿತ್ತು. ಪಾಳುಬಿದ್ದ ರಾಮತೀರ್ಥ ಮತ್ತು ಲಕ್ಷ್ಮಣತೀರ್ಥ ಬಾವಿಯಿಂದ ಹೂಳು ತಗೆಯುವ ಕಾರ್ಯವನ್ನು ಜಿಲ್ಲಾಡಳಿತ ಈಗ ಕೈಗೆತ್ತಿಕೊಂಡಿದೆ. ಆದರೆ ಕಳೆದ 5 ದಿನಗಳಿಂದ ಸತತವಾಗಿ ಬಾವಿಯಿಂದ ನೀರು ತಗೆಯುತ್ತಿದ್ದರೂ ನೀರು ಖಾಲಿಯಾಗುತ್ತಿಲ್ಲ. ಕಡು ಬೇಸಿಗೆಯಲ್ಲೂ ಬಾವಿಯ ನೀರು ಖಾಲಿಯಾಗದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಕುತೂಹಲ: 10 ಅಶ್ವಶಕ್ತಿಯ 5 ಮತ್ತು 20 ಅಶ್ವಶಕ್ತಿಯ 2 ಸೇರಿದಂತೆ 90 ಎಚ್ಪಿ ಪಂಪ್ಸೆಟ್ ಮತ್ತು ಟ್ರ್ಯಾಕ್ಟರ್ ಮೂಲಕ ನಿರಂತರವಾಗಿ ನೀರು ತಗೆಯುತ್ತಿದ್ದರೂ ಬಾವಿಯಲ್ಲಿಯ ನೀರು ಖಾಲಿಯಾಗದಿರುವುದು ಗ್ರಾಮಸ್ಥರ ಕುತೂಹಲಕ್ಕೆ ಕಾರಣವಾಗಿದೆ. ಇದು ದೇವರ ದಾಸಿಮಯ್ಯನವರ ಮಹಿಮೆ ಎನ್ನುತ್ತಾರೆ ಸ್ಥಳೀಯರು.
ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಈ ಬಾವಿಗಳಿಗೆ ಹೆಚ್ಚಿನ ನೀರಿನ ಸೆಲೆ ಇದ್ದು, ನೀರನ್ನು ನಿಯಂತ್ರಿಸುವುದು ಸವಾಲಾಗಿದೆ. ಬಾವಿಯ ಅಭಿವೃದ್ಧಿ ಉಸ್ತುವಾರಿ ವಹಿಸಿಕೊಂಡಿರುವ ಭೂ ಸೇನಾ ನಿಗಮವು ನೀರು ಹೊರ ತಗೆಯಲು ಪರ್ಯಾಯ ವ್ಯವಸ್ಥೆಗೆ ಚಿಂತನೆ ನಡೆಸಿದೆ. ನಿಗಮದವರು ತೆಗೆದಷ್ಟು ನೀರು ಖಾಲಿಯಾಗದ ಹಿನ್ನೆಲೆಯಲ್ಲಿ ನೀರು ಖಾಲಿ ಮಾಡುವುದೇ ಚಿಂತೆಗೀಡು ಮಾಡಿದೆ.
ವಿಶೇಷ ಅನುದಾನ: ಮುದನೂರು ಕ್ಷೇತ್ರದ ಅಭಿವೃದ್ಧಿಗೆ ಹಿಂದೆ ದಾಸಿಮಯ್ಯನ ಶತಮಾನೋತ್ಸವ ಸಮಾರಂಭದಲ್ಲಿ ವಿಶೇಷ ಅನುದಾನವನ್ನು ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ರಾಜುಗೌಡ ಬಿಡುಗಡೆ ಮಾಡಿಸಿದ್ದರು. ಈಗ ಅಭಿವೃದ್ಧಿ ಕಾರ್ಯಗಳಾದ ತೀರ್ಥಗಳ ನವೀಕರಣ, ದಾಸೋಹ ಮಂಟಪದ ಕಾಮಗಾರಿ ಭರದಿಂದ ನಡೆದಿವೆ. ಆದರೆ ಗುಡಿಯ ಮೇಲಿರುವ ಮನೆಗಳ ಸ್ಥಳಾಂತರ ಕಾರ್ಯ ವಿಳಂಬವಾಗುತ್ತಿದೆ. ಇದಕ್ಕೆ ಸರ್ಕಾರ 20 ಎಕರೆ ಜಮೀನು ಒದಗಿಸಿದರೂ ಇನ್ನೂ ಮನೆಗಳು ಸ್ಥಳಾಂತರವಾಗುತ್ತಿಲ್ಲ.
ಈಗಿನ ಶಾಸಕ ರಾಜಾ ವೆಂಕಟಪ್ಪ ನಾಯಕ ಈ ಕಾರ್ಯದಲ್ಲಿ ವಿಶೇಷ ಆಸಕ್ತಿ ತೋರಿಸಿ ಈ ದೇವಸ್ಥಾನವನ್ನು ಪ್ರವಾಸಿ ಸ್ಥಳವನ್ನಾಗಿ ಮಾಡಬೇಕೆಂಬುದು ಈ ಭಾಗದ ನಾಗರಿಕರ ಒತ್ತಾಸೆಯಾಗಿದೆ.