'ತಾಲೂಕು ಕೇಂದ್ರ ರದ್ದುಪಡಿಸಿದ್ರೆ ಹೋರಾಟ'
ಯಾದಗಿರಿ: ಹಿಂದಿನ ಬಿಜೆಪಿ ಸರ್ಕಾರ ಘೋಷಣೆ ಮಾಡಿದ್ದ ಹೊಸ ತಾಲೂಕು ಕೇಂದ್ರಗಳನ್ನು ಪ್ರಸ್ತುತ ಕಾಂಗ್ರೆಸ್ ಸರ್ಕಾರ ರದ್ದುಪಡಿಸಿದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಘೋಷಿತ ವಡಗೇರಾ ತಾಲೂಕು ಕೇಂದ್ರ ವ್ಯಾಪ್ತಿಯ ಜನರು ಎಚ್ಚರಿಸಿದ್ದಾರೆ.
ಆಡಳಿತದ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಜಿಲ್ಲಾ ಪುನರ್ ವಿಂಗಡನಾ ಸಮಿತಿಗಳನ್ನು ರಚಿಸಿತ್ತು. ಹುಂಡೇಕಾರ, ಗದ್ದಿಗೌಡರ, ವಾಸುದೇವರಾವ ಹಾಗೂ ಎಂ.ಬಿ. ಪ್ರಕಾಶ ಸಮಿತಿಗಳು ಅನೇಕ ಜಿಲ್ಲೆ ಹಾಗೂ ಹೋಬಳಿಗಳಲ್ಲಿ ಸಂಚರಿಸಿ ಹೊಸ ತಾಲೂಕು ಕೇಂದ್ರಕ್ಕೆ ಅರ್ಹವಾಗಿರುವ ಸ್ಥಳಗಳ ವರದಿಯಲ್ಲಿ ನಮೂದಿಸಿ ಸರ್ಕಾರಕ್ಕೆ ಸಲ್ಲಿಸಿತ್ತು.
ಜಿಲ್ಲೆಯಲ್ಲಿ ನೂತನ 3 ತಾಲೂಕು ಕೇಂದ್ರ: ಅದರಂತೆ ರಾಜ್ಯ ಸರ್ಕಾರವು ಅನೇಕ ಜಿಲ್ಲೆಗಳ ಘೋಷಣೆಯನ್ನು ಮಾಡಿತು. ಅದರ ಜತೆಗೆ ಕಳೆದ ಫೆಬ್ರವರಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರವು 43 ಹೊಸ ತಾಲೂಕುಗಳ ಘೋಷಣೆಯನ್ನು ಮಾಡಿತು. ಅದರಲ್ಲಿ ಜಿಲ್ಲೆಯ ಶಹಾಪುರದ ವಡಗೇರಾ, ಯಾದಗಿರಿಯ ಗುರುಮಠಕಲ್ ಮತ್ತು ಸುರಪುರದ ಹುಣಸಗಿ ನೂತನ ತಾಲೂಕು ಕೇಂದ್ರಗಳೆಂದು ಘೋಷಣೆ ಮಾಡಿತು. ಈ ಭಾಗದ ಅನೇಕ ಸಂಘ ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷದ ಮುಖಂಡರು ಸಂಭ್ರಮವನ್ನು ಆಚರಿಸಿದ್ದರು.
ಆದರೆ ಕಳೆದ 9 ವರ್ಷಗಳಿಂದ ಅಧಿಕಾರದಿಂದ ವಂಚಿತಗೊಂಡಿದ್ದ ಕಾಂಗ್ರೆಸ್ ರಾಜ್ಯದಲ್ಲಿ ಬಹುಮತ ಪಡೆದು ಅಧಿಕಾರದಲ್ಲಿ ಬಂದ ಕೆಲವೇ ದಿನಗಳಲ್ಲಿ ಹಿಂದಿನ ಸರ್ಕಾರ ಘೋಷಣೆ ಮಾಡಿದ್ದ ನೂತನ ತಾಲೂಕುಗಳನ್ನು ರದ್ದುಪಡಿಸಲಾಗುವುದು ಎಂದು ಕಂದಾಯ ಮಂತ್ರಿಗಳ ಹೇಳಿಕೆಯನ್ನು ಇಲ್ಲಿಯ ಅನೇಕ ಸಂಘಸಂಸ್ಥೆಗಳು ಖಂಡಿಸಿವೆ.
ಹೋರಾಟ ಸಮಿತಿ ಖಂಡನೆ: ಕಂದಾಯ ಮಂತ್ರಿಗಳು ನೂತನ ತಾಲೂಕು ಕೇಂದ್ರವೊಂದರ ಅಭಿವೃದ್ಧಿಗೆ 100 ಕೋಟಿ ಬೇಕಾಗುತ್ತದೆ ಎಂದು ಹೇಳಿರುವುದನ್ನು ಇಲ್ಲಿಯ ತಾಲೂಕಾ ಹೋರಾಟ ಸಮಿತಿಯು ಖಂಡಿಸಿ, ಈಗ ಸರ್ಕಾರ ಘೋಷಣೆ ಮಾಡಿದ ತಾಲೂಕಾಗಳ ಅಭಿವೃದ್ಧಿಗೆ ಅಷ್ಟು ಹಣದ ಅವಶ್ಯಕತೆ ಇಲ್ಲ ಎಂದು ಹೇಳಿದೆ.
ಯಾವುದೇ ಸರ್ಕಾರ ಯಾವುದಾದರೂ ಒಂದು ಯೋಜನೆಯನ್ನು ಜಾರಿಗೆ ತರಬೇಕಾದರೆ ಅನೇಕ ವೇಳೆ ಯೋಚಿಸಿ ಹಾಗೂ ಅದರಿಂದ ಸಾರ್ವಜನಿಕರಿಗೆ ಎಷ್ಟು ಅನುಕೂಲವಾಗುತ್ತದೆ ಎಂಬುದನ್ನು ಪರಾಮರ್ಶಿಸಿ ಸಾರ್ವಜನಕರಿಗೆ ಅದರಿಂದ ಪ್ರಯೋಜವಾಗುತ್ತಿದ್ದರೆ ಅದನ್ನು ಜಾರಿಗೆ ತರುವುದು ಅಗತ್ಯವಾಗಿದೆ.
ರದ್ದುಪಡಿಸುವುದು ಒಳಿತಲ್ಲ: ಈಗ ತಾಲೂಕು ಕೇಂದ್ರವೆಂದು ಘೋಷಣೆ ಮಾಡಿದ ವಡಗೇರಾ ವ್ಯಾಪ್ತಿಯ ಕೊನೆ ಅಂಚಿನ ಗ್ರಾಮದವರು ತಾಲೂಕು ಕೇಂದ್ರವಾದ ಶಹಾಪುರಕ್ಕೆ ಹೋಗಬೇಕಾದರೆ ಸುಮಾರು 80ರಿಂದ 100 ಕಿಮೀ ಪ್ರಯಾಣಿಸಬೇಕಾಗುತ್ತದೆ. ಅದನ್ನು ಮನಗಂಡು ವಡಗೇರಾವನ್ನು ತಾಲೂಕು ಕೇಂದ್ರವೆಂದು ಘೋಷಿಸಿರುವುದು ಸರಿಯಾಗಿದೆ. ಆದ್ದರಿಂದ ಹೊಸ ತಾಲೂಕು ಅಭಿವೃದ್ಧಿಗೆ ಸರ್ಕಾರ ಗಮನ ನೀಡಬೇಕೇ ಹೊರತು ರದ್ದುಪಡಿಸುವುದು ಸರಿಯಲ್ಲ. ಒಂದು ವೇಳೆ ರದ್ದುಪಡಿಸಿದರೆ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು
ವಡಗೇರಾ ತಾಲೂಕಾ ಹೋರಾಟ ಸಮಿತಿ, ಅನೇಕ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಎಚ್ಚರಿಸಿವೆ.