ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮೂಲ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

Lingaraj Badiger
Updated On : 29 May 2013, 11:18 am

ಕ.ಪ್ರ. ವಾರ್ತೆ  ಯಾದಗಿರಿ  ಮೇ 28
ನಗರದ ರಾಜೀವಗಾಂಧಿ ಬಡಾವಣೆಯಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಕಾರ್ಯಾಧ್ಯಕ್ಷ ಭೀಮಾಶಂಕರ ಆಲ್ದಾಳ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ನಗರಸಭೆ ಕಾರ್ಯಾಲಯದ ಮುಂದೆ ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
  ಈ ಸಂದರ್ಭದಲ್ಲಿ ಮಾತನಾಡಿದ ಆಲ್ದಾಳ, ಯಾದಗಿರಿ ಜಿಲ್ಲಾ ಕೇಂದ್ರವಾಗಿ 4 ವರ್ಷಗಳಾಗುತ್ತಾ ಬಂದರೂ ನಗರದಲ್ಲಿ ಇನ್ನೂ ಮೂಲ ಸೌಕರ್ಯವಿಲ್ಲದೆ ನಾಗರಿಕರು ಪರದಾಡುವಂತಾಗಿದೆ. ಪ್ರತಿನಿತ್ಯ ನಗರದ ಬಡಾವಣೆಗಳ ಜನತೆ ಸಮಸ್ಯೆಗಳಿಂದ ಪರದಾಡುವಂತಾಗಿದ್ದು, ನಗರಸಭೆ ಇದ್ದರೂ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಸ್ವಚ್ಛತೆ ಮರೀಚಿಕೆ: ರಾಜೀವಗಾಂಧಿ ಬಡಾವಣೆಯಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದ್ದು, ಪ್ರತಿದಿನ ಇಲ್ಲಿನ ನಾಗರಿಕರು ಸಮಸ್ಯೆಗಳಲ್ಲಿ ಒದ್ದಾಡುತ್ತಿದ್ದಾರೆ. ಬಡಾವಣೆಯಲ್ಲಿ ಒಳ ಚರಂಡಿ, ಸಿಸಿ ರಸ್ತೆ ಮತ್ತು ಕುಡಿಯುವ ನೀರು ಸಮರ್ಪಕವಾಗಿಲ್ಲ. ಬಡಾವಣೆಯಲ್ಲಿ ಬೀದಿ ದೀಪಗಳಿಲ್ಲದ ಪರಿಣಾಮ ವಿಷಜಂತುಗಳ ಹಾವಳಿ ಹೆಚ್ಚಾಗುತ್ತಿದ್ದು, ಜನತೆ ಅಂಗೈಯಲ್ಲಿ ಜೀವ ಹಿಡಿದುಕೊಂಡು ಕಾಲ ದೂಡುವಂತಾಗಿದೆ. ಇಷ್ಟಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸದಿರುವುದು ವಿಷಾದಕರ ಸಂಗತಿ ಎಂದರು. ಇಲ್ಲಿನ ಬಡಾವಣೆ ಸಮಸ್ಯೆಯ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿಕೊಂಡರೂ ಸ್ಪಂದಿಸದೆ ಬೇಜವಾಬ್ದಾರಿತನ ಮೆರೆಯುತ್ತಿದ್ದಾರೆ. ಇದು ಹೀಗೆಯೇ ಮುಂದುವರೆದಲ್ಲಿ ನಿವಾಸಿಗಳು ನಗರಸಭೆಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದರು. ವಿಜಯಕುಮಾರ ಶಿರಗೋಳ, ಹಣಮಂತ, ನಿಂಗಪ್ಪ ಮ್ಯಾಗೇರಿ, ಜಗದೀಶ ದಾಸನಕೇರಾ, ಮಲ್ಲಿಕಾರ್ಜುನ, ಎಂ.ಬಿ ನಾಜೀಮ, ಸಲೀಂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement