ಶಹಾಪುರ ಪಪಂ ಮುಖ್ಯಾಧಿಕಾರಿ ವಿರುದ್ಧ ಕಂದಕೂರ ಆಕ್ರೋಶ
ಕ.ಪ್ರ. ವಾರ್ತೆ ಶಹಾಪುರ ಮೇ 28
ಪಟ್ಟಣದ 6 ಮತ್ತು 7ನೇ ವಾರ್ಡು ಸೇರಿದಂತೆ ಇನ್ನಿತರ ಬಡಾವಣೆಯಲ್ಲಿ ದಿನನಿತ್ಯ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಕೊಡ ನೀರಿಗಾಗಿ ಎಲ್ಲ ಕಡೆ ಸರತಿ ಸಾಲು ಹೆಚ್ಚಾಗುತ್ತಿದ್ದು ನೀರಿಗಾಗಿ ಪರಿತಪಿಸುವಂಥ ಸ್ಥಿತಿ ನಿರ್ಮಾಣವಾಗಿದೆ. ಇದು ಮುಖ್ಯಾಧಿಕಾರಿ ಗಮನಕ್ಕಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ಭಾವನೆ ತಾಳುತ್ತಿದ್ದು, ಇಂಥ ಮುಖ್ಯಾಧಿಕಾರಿಗಳಿಂದ ಮೂಲ ಸೌಕರ್ಯಕ್ಕೆ ಸಂಚಕಾರ ಬಂದಿದೆ ಎಂದು ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನೀರಿನ ತೊಂದರೆ ಬಗ್ಗೆ ನೂತನ ಶಾಸಕರೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿದ್ದು ಯಾವುದೇ ವಾರ್ಡಿನಲ್ಲಿ ನೀರಿನ ಸಮಸ್ಯೆಯಾದರೂ ತಕ್ಷಣವೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಅನುದಾನದ ಅವಕಾಶವಿದ್ದು ಪುರಸಭೆ ಮುಖ್ಯಾಧಿಕಾರಿಗಳಿಗೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಬೇಜವಾಬ್ದಾರಿ ಹೇಳಿಕೆ: ಆದರೆ ಇದ್ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದ ಮುಖ್ಯಾಧಿಕಾರಿಗಳು ಶಹಾಪುರ ಪಟ್ಟಣದಲ್ಲಿ ನೀರಿನ ಸಮಸ್ಯೆ ಇಲ್ಲವೆಂದು ಹೇಳುತ್ತಾ ದಿನ ದೂಡುತ್ತಿದ್ದಾರೆ. ಪಟ್ಟಣದ ಬಹುತೇಕ ವಾರ್ಡುಗಳಲ್ಲಿ ಬೆಳಗಾದರೆ ಕೊಳವೆಬಾವಿ, ನಳದ ಮುಂದೆ ನೂರಾರು ಕೊಡಗಳೊಂದಿಗೆ ಜನರು ಪರದಾಡುವ ದೃಶ್ಯ ಸಾಮಾನ್ಯವಾಗಿದೆ. ಇದರಿಂದ ಬೇಸತ್ತಿರುವ ಜನತೆ ರೊಚ್ಚಿಗೇಳುತ್ತಿದ್ದಾರೆ.
ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿಯುತ್ತಿದೆ. ನೀರು ಸಂಗ್ರಹ ಕೇಂದ್ರ(ಫಿಲ್ಟರ್‌ಬೆಡ್)ದಲ್ಲಿ ನೀರು ಕಡಿಮೆಯಾಗಿದೆ. ಪುರಸಭೆಯ ಪುರಾತನ ಬಾವಿಗಳು ಕುಡಿಯಲು ಯೋಗ್ಯವಾಗಿಲ್ಲ. ಕೆಲವೆಡೆ ಅನಾವಶ್ಯಕ ನೀರು ಪೋಲಾಗುತ್ತಿದೆ. ತಕ್ಷಣವೇ ಮುಖ್ಯಾಧಿಕಾರಿಗಳು ನೀರಿಲ್ಲದ ಬಡಾವಣೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಸಾರ್ವಜನಿಕರೇ ಕೊಡ ಹಿಡಿದು ಪುರಸಭೆಗೆ ಮುತ್ತಿಗೆ ಹಾಕುವ ಅನಿವಾರ್ಯತೆ ಬಂದೀತು ಎಂದು ಕಂದಕೂರ ಎಚ್ಚರಿಸಿದ್ದಾರೆ.