ಹೊಸ ತಾಲೂಕು ಕೇಂದ್ರ ಅಧಿಕೃತ ಘೋಷಣೆಗೆ ಆಗ್ರಹ
ಗುಲ್ಬರ್ಗ/ಶಹಾಬಾದ್: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಹಾಬಾದ್ ಸೇರಿದಂತೆ ಒಟ್ಟು 43 ತಾಲೂಕು ಕೇಂದ್ರವೆಂದು ಹಿಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಘೋಷಿಸಿ, ಆಯವ್ಯಯ ಮಂಡನೆಯಲ್ಲಿ ತಲಾ 2 ಕೋಟಿ ರು. ನೀಡುವುದಾಗಿ ಮಾಡಿದ್ದ ಘೋಷಣೆಯನ್ನು ಕಾಂಗ್ರೆಸ್ ಸರ್ಕಾರ ಪರಿಶೀಲಿಸುವ ಕುರಿತ ಹೇಳಿಕೆ ನೀಡಿದ್ದು, ಇದಕ್ಕೆ ಬಿಜೆಪಿ ಹೋರಾಟ ಸಮಿತಿ, ದಸಂಸ ಆಕ್ರೋಶ ವ್ಯಕ್ತಪಡಿಸಿವೆ.
ಬಿಜೆಪಿ ಆಕ್ರೋಶ: ಹಿಂದಿನ ಸರ್ಕಾರದ ಅವಧಿಯಲ್ಲಿ ಸುಗಮ ಆಡಳಿತಕ್ಕಾಗಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಹೊಸ ತಾಲೂಕು ರಚನೆಗೆ ಚಾಲನೆ ನೀಡಿ ರಾಜ್ಯದಲ್ಲಿ 43 ಹೊಸ ತಾಲೂಕುಗಳ ಘೋಷಣೆ ಮಾಡಿದ್ದನ್ನು ರದ್ದುಗೊಳಿಸುತ್ತಿರುವ ಕಾಂಗ್ರೆಸ್ ಅಭಿವೃದ್ಧಿ ವಿರೋಧಿ ನೀತಿ ಅನುಸರಿಸಿದೆ ಎಂದು ನಗರ ಬಿಜೆಪಿ ಘಟಕ ಖಂಡಿಸಿ, ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಹೇಳಿಕೆ ನೀಡಿದ ಬಿಜೆಪಿ ನಗರ ಅಧ್ಯಕ್ಷ ಡಾ.ಅಶೋಕ ಜಿಂಗಾಡೆ, ಜಿಲ್ಲಾ ಉಪಾಧ್ಯಕ್ಷ ಅರುಣಕುಮಾರ ಪಟ್ಟಣಕರ್, ಕಾರ್ಯದರ್ಶಿ ನವನಾಥ ಕುಸಾಳೆ, ಮುಖಂಡರಾದ ಭೀಮರಾವ್ ಸಾಳೊಂಕೆ, ಜಗದೀಶ ಶೆಟ್ಟರ್ ಸರ್ಕಾರ ಹೊಸ ತಾಲೂಕು ಘೋಷಣೆ ಮಾಡಿದ್ದಲ್ಲದೆ, ಅದಕ್ಕೆ ಅವಶ್ಯಕತೆ ಅನುಸಾರ ಪ್ರತಿ ತಾಲೂಕಿಗೆ 2 ಕೋಟಿ ರು. ಮಂಜೂರು ಮಾಡಿದ್ದರು. ಹೊಸ ತಾಲೂಕು ರಚನೆಯಲ್ಲಿ ಕಾಂಗ್ರೆಸ್ ಸರ್ಕಾರ ರಾಜಕೀಯ ನಡೆಸುತ್ತಿದ್ದು, ತಾಲೂಕು ರಚನೆಯನ್ನು ಕೂಡಲೇ ಜಾರಿಗೆ ಬರದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹೋರಾಟ ಸಮಿತಿಯಿಂದ ಹೋರಾಟ ಎಚ್ಚರಿಕೆ: ರಾಜ್ಯದಲ್ಲಿ ಅಧಿಕಾರಿಕ್ಕೆ ಬಂದಿರುವ ಹೊಸ ಸರ್ಕಾರ ಶಹಾಬಾದ್ ತಾಲೂಕು ರಚನೆಯನ್ನು ಕೈಬಿಟ್ಟಿರುವ ಕ್ರಮವನ್ನು ವಿರೋಧಿಸಿರುವ ತಾಲೂಕು ಹೋರಾಟ ಸಮಿತಿ, ನೂತನ ತಾಲೂಕು ರಚನೆಗಾಗಿ ಹಿಂದಿನ ಸರ್ಕಾರಗಳು ನೇಮಿಸಿದ ಗದ್ದೆಗೌಡ, ಹುಂಡೇಕಾರ, ನಂಜುಂಡಪ್ಪ, ನ್ಯಾ. ಎಂ.ಬಿ. ಪ್ರಕಾಶ ಸಮಿತಿಗಳು ಶಹಾಬಾದ್ ತಾಲೂಕು ರಚನೆಗೆ ಶಿಫಾರಸು ಮಾಡಿದ್ದರು. ನೂತನ ತಾಲೂಕು ಘೋಷಣೆಯನ್ನು ಸರ್ಕಾರ ಹಿಂದಕ್ಕೆ ಪಡೆದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಾಲಕಿಶನ್ ವರ್ಮಾ, ಅಧ್ಯಕ್ಷ ಶಶಿಕಾಂತ ಪಾಟೀಲ್, ಕಾರ್ಯದರ್ಶಿ ಶರಣಪ್ಪ ಹದನೂರ, ಸಂತೋಷಕುಮಾರ ಇಂಗಿನಶೆಟ್ಟಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕರಾದಸಂಸ ಖಂಡನೆ, ಹೋರಾಟ ಎಚ್ಚರಿಕೆ: ಶಹಾಬಾದ್ ನಗರವನ್ನು ತಾಲೂಕು ಕೇಂದ್ರವಾಗಿ ಹಿಂದಿನ ಸರ್ಕಾರ ಘೋಷಿಸಿರುವುದನ್ನು ರಾಜ್ಯದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರ್ಕಾರ ಹಿಂದಕ್ಕೆ ಪಡೆಯುವ ಕ್ರಮವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಕೃಷ್ಣಪ್ಪ ಕರಣಿಕೆ, ನಗರ ಸಂಚಾಲಕ ಮಹಾದೇವ ನಾಲವಾರಕರ್, ಮುಖಂಡರಾದ ರಾಮಕುಮಾರ ಸಿಂಘೆ, ಈ ಬಗ್ಗೆ ಸರ್ಕಾರ ತನ್ನ ನಿರ್ಣಯವನ್ನು ಹಿಂದಕ್ಕೆ ತೆಗೆದುಕೊಳ್ಳದೇ ಇದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಧಿಕೃತ ಘೋಷಣೆಗೆ ಆಗ್ರಹ
ಗುಲ್ಬರ್ಗ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಘೋಷಣೆಯಾಗಿರುವ ತಾಲೂಕುಗಳನ್ನು ಅಧಿಕೃತವಾಗಿ ಪ್ರಸ್ತುತ ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡುವಂತೆ ಆಗ್ರಹಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.