ಕರಡಕಲ್: ಜೂ.18ರಂದು 108 ಜೋಡಿ ಕಲ್ಯಾಣ ಮಹೋತ್ಸವ
ಸುರಪುರ: ತಾಲೂಕಿನ ಕರಡಕಲ್ ಕೋರಿಸಿದ್ದೇಶ್ವರ ಶಾಖಾ ಮಠದಲ್ಲಿ ಜೂ.18ರಂದು 108 ಜೋಡಿಗಳ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಪೀಠಾಧಿಪತಿ ಶಾಂತರುದ್ರಮುನಿ ಸ್ವಾಮೀಜಿ ತಿಳಿಸಿದ್ದಾರೆ. ಶ್ರೀಮಠದಲ್ಲಿ ಜಾತ್ರಾ ಮಹೋತ್ಸವದ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ, ಬಸವಣ್ಣನವರ ವಾಣಿಯಂತೆ ಕಾಯಕದಲ್ಲಿಯೇ ಕೈಲಾಸ ಕಾಣಬೇಕು. ದೇವರು, ಅಧ್ಯಾತ್ಮ ಮತ್ತು ಗುರು-ಹಿರಿಯರನ್ನು ಗೌರವದಿಂದ ಕಾಣಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಪುರಾಣ ಮಂಗಲ, ನಾಲವಾರ ಶ್ರೀಗಳ ಭವ್ಯ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮತ್ತು ಜೂ.19ರಂದು ಜಾತ್ರಾ ಮಹೋತ್ಸವ ಹಾಗೂ ಸರ್ವ ಧರ್ಮ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು. ಮುದನೂರಿನ ಮಲ್ಲಿಕಾರ್ಜುನ ದೇವರು, ಖೈರಾವಡಗಿಯ ಶರಣಪ್ಪ ಶರಣರು, ಕರವೇ ರಾಜ್ಯ ಸಂಚಾಲಕ ಬಸವರಾಜ ಪಡುಕೋಟಿ, ರವಿ ಸೊನ್ನದ ಕೆಂಭಾವಿ, ಬಸವರಾಜಪ್ಪ ಗೌಡ, ಬೊಮ್ಮನಳ್ಳಿ, ಸೂಗುರೇಶ, ನಾನಾಗೌಡ, ಶಿವಪ್ರಕಾಶ ಇದ್ದರು.