ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಇಸ್ಲಾಂ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 29
ವಿಭಾಗೀಯ ಕೇಂದ್ರವಾಗಿರುವ ಗುಲ್ಬರ್ಗ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವುದಕ್ಕಾಗಿ 200 ಕೋಟಿ ಅಗತ್ಯವಾಗಿದ್ದು, ಈ ಕುರಿತು ಪ್ರಸ್ತಾವನೆಯೊಂದನ್ನು ಸಿದ್ಧಪಡಿಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ತಿಳಿಸಿದರು.
ಕುಡಿಯವ ನೀರಿನ ಸಮಸ್ಯೆ ಕುರಿತು ಜಲ ಮಂಡಳಿಯ ಅಧಿಕಾರಗಳೊಂದಿಗೆ ಸಭೆ ನಡೆಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಂಟು ದಿನಗಳಲ್ಲಿಯೇ ಪ್ರಸ್ತಾವನೆ ಸಿದ್ಧಪಡಿಸುವಂತೆ ತಿಳಿಸಲಾಗಿದೆ ಎಂದರು.
ನಗರದ ಜನಸಂಖ್ಯ 7 ಲಕ್ಷ. ಈ ಜನಸಂಖ್ಯೆಗೆ 10 ಎಂಜಿಡಿ ನೀರು ಅಗತ್ಯವಿದೆ. ಆದರೆ, ಸದ್ಯ 12 ಎಂಜಿಡಿ ಮಾತ್ರ ಪೂರೈಸಲು ಸಾಧ್ಯ. ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ನೀರು ವಿತರಣಾ ಜಾಲ ಸುಧಾರಿಸಬೇಕಾಗಿದೆ. ಅದಕ್ಕಾಗಿ ಪೈಪ್ಲೈನ್ ದುರಸ್ತಿ ಮಾಡಬೇಕಾಗಿದೆ. ಹೊಸ ಓವರ್ ಹೆಡ್ ಟ್ಯಾಂಕ್ಗಳನ್ನು ನಿರ್ಮಿಸಬೇಕು. ಅದಕ್ಕಾಗಿ 200 ಕೋಟಿ ಬೇಕಾಗಬಹುದುದೆಂದು ಅಂದಾಜಿಸಲಾಗಿದೆ ಎಂದರು.
ಭೀಮಾ ಹಾಗೂ ಬೆಣ್ನೆತೊರೆಯಿಂದ ಹೆಚ್ಚಿನ ನೀರು ಪಡೆಯಲು ಅವಕಾಶವಿದೆ. ಸದ್ಯ ಭೀಮಾದಿಂದ 10 ಎಂಜಿಡಿ ಹಾಗೂ ಬೆಣ್ಣೆತೊರೆಯಿಂದ ಕೇವಲ 2 ಎಂಜಿಡಿ ನೀರು ಪಡೆಯಲಾಗುತ್ತಿದೆ. ಹೀಗಾಗಿ 6 ಎಂಜಿಡಿ ನೀರಿನ ಕೊರತೆ ಎದುರಿಸುವಂತಾಗಿದೆ ಎಂದರು.
200 ಕೋಟಿ ಪ್ರಸ್ತವಾನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ನೆರವು ಪಡೆಯಲು ಅವಕಾಶವಿದೆ. ಸ್ಥಳೀಯ ಸಂಸ್ಥೆ ಹಾಗೂ ರಾಜ್ಯ ಸರ್ಕಾರ ತಲಾ ಶೇ.10ರಷ್ಟು ಭರಿಸಲಿದೆ. ಇನ್ನುಳಿದ ಶೇ.80 ರಷ್ಟು ನೆರವು ಇಲ್ಲದೆ ಹಣಕಾಸು ಸಂಸ್ಥೆಗಳಿಂದ ಸಾಲದ ರೂಪದಲ್ಲಿ ಪಡೆಯಲು ಅವಕಾಶವಿದೆ ಎಂದು ವಿವರಿಸಿದರು.
39 ಕೋಟಿ ಬಿಡುಗಡೆ: ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ಒಟ್ಟು 200 ಕೋಟಿಯನ್ನು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ರಸ್ತೆ ಅಗಲೀಕರಣದಲ್ಲಿ ಆಸ್ತಿ ಕಳೆದುಕೊಂಡವರಿಗೆ ಪಾವತಿಸಲಾದ 39 ಕೋಟಿ ರಾಜ್ಯ ಸರ್ಕಾರ ಮರು ಪಾವತಿಸಿದೆ ಎಂದು ಹೇಳಿದರು.
ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಗಳಲ್ಲಿ ತಾವೇ ಅನೇಕ ಬಾರಿ ಈ ವಿಷಯ ಪ್ರಸ್ತಾಪಿಸಲಿ 39 ಕೋಟಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ. ಗುಲ್ಬರ್ಗದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಈ ಅನುದಾನ ಬಿಡುಗಡೆ ಮಾಡಿದೆ ಎಂದರು.
ವಿದ್ಯುತ್ ತೊಂದರೆ; ನೀರು ಸರಬರಾಜಿಗೆ ಕಂಟಕ
ಕನ್ನಡಪ್ರಭ ವಾರ್ತೆ, ಸೇಡಂ, ಮೇ 29
ಕೆಲವು ದಿನಗಳಿಂದ ಪಟ್ಟಣದಲ್ಲಿ ಸರಬರಾಜು ಆಗುವ ವಿದ್ಯುತ್ನಲ್ಲಿ ತೊಂದರೆಯಾಗುತ್ತಿದ್ದು, ಇದರಿಂದ ನೀರು ಸರಬರಾಜಿಗೆ ಸಮಸ್ಯೆಯಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಬಸವರಾಜ ಶಿವಪೂಜೆ ತಿಳಿಸಿದ್ದಾರೆ.
ರಾತ್ರಿ, ಹಗಲೆನ್ನದೆ ಕರೆಂಟ್ ಕಟ್ ಆಗುತ್ತಿರುವುದರಿಂದ ಮೇಲ್ಮಟ್ಟದ ಟ್ಯಾಂಕ್ಗಳನ್ನು ಭರ್ತಿ ಮಾಡಲು ಆಗುತ್ತಿಲ್ಲ. ಇನ್ನೂ ಕೆಲವು ಕಡೆ ಬೋರ್ವೆಲ್ಗಳಿಗೆ ಮೋಟಾರ್ ವ್ಯವಸ್ಥೆ ಮಾಡಿ ನೀರು ಸರಬರಾಜು ಮಾಡುತ್ತಿರುವುದರಿಂದ ವಿದ್ಯುತ್ ಅವಶ್ಯವಾಗಿದೆ.
ಕೆಲವು ದಿನಗಳಿಂದ ವಿದ್ಯುತ್ ಮೇಲಿಂದ ಮೇಲೆ ಕಟ್ ಆಗುತ್ತಿರುವುದರಿಂದ ಪುರಸಭೆಗೆ ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡಲು ಆಗುತ್ತಿಲ್ಲ. ವಿದ್ಯುತ್ ಇಲ್ಲದೆ ಇರುವ ಕಾರಣದಿಂದ ನಾವು ಅಸಹಾಯಕರಾಗಿದ್ದು, ಪಟ್ಟಣದ ಜನತೆ ಸಹಕರಿಸಬೇಕೆಂದು ಅವರು ಕೋರಿದ್ದಾರೆ.