ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಖಾಸಗಿ ಬಸ್ ಸಂಚಾರಕ್ಕೆ ಬ್ರೇಕ್ ಹಾಕಿ

Lingaraj Badiger
Updated On : 30 May 2013, 11:20 am

ಕನ್ನಡಪ್ರಭ ವಾರ್ತೆ  ಯಾದಗಿರಿ  ಮೇ 29
ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳ ಅನಧಿಕೃತ ಕಾರ್ಯಾಚರಣೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಎನ್ಇಕೆಆರ್ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಯೂನಿಯನ್ ಹಾಗೂ ಇನ್ನಿತರ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಬುಧವಾರ ಮನವಿ ಸಲ್ಲಿಸಿದ್ದಾರೆ.
  ಜಿಲ್ಲೆಯ ಶಹಾಪುರ, ಯಾದಗಿರಿ, ಗುರುಮಠಕಲ್ಗಳ ಮಧ್ಯೆ ಖಾಸಗಿ ಬಸ್ಗಳ ಕಾರ್ಯಾಚರಣೆ ಪ್ರಾರಂಭವಾಗಿದ್ದು, ಸ್ಟೇಜ್ ಕ್ಯಾರೇಜ್ ರೀತಿಯಲ್ಲಿ ಅನಧಿಕೃತವಾಗಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಸಂಘಟನೆಯ ಒತ್ತಾಯದಿಂದಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತುರ್ತು ಕ್ರಮ ಜರುಗಿಸಿ ಖಾಸಗಿ ಬಸ್ಗಳ ಓಡಾಟವನ್ನು ನಿಲ್ಲಿಸಿದ್ದಾರೆ.
  ಜಿಲ್ಲೆ ಸಂಪೂರ್ಣವಾಗಿ ರಾಷ್ಟ್ರೀಕೃತಗೊಂಡಿದ್ದು, ಸರ್ಕಾರಿ ರಂಗದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾತ್ರ ಪ್ರಯಾಣಿಕರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಲು ಅಧಿಕಾರ ಹೊಂದಿರುತ್ತದೆ. ಆದರೆ ಖಾಸಗಿ ಬಸ್ಗಳು ಯಾವುದೇ ಕಾರಣಕ್ಕೂ ಪ್ರಯಾಣಿಕರನ್ನು ಸಾಗಿಸಲು ಅವಕಾಶ ಇರುವುದಿಲ್ಲ ಎಂದು ಅವರು ತಿಳಿಸಿದರು.
ಪ್ರಯಾಣಿಕ ಸ್ನೇಹಿ ಯೋಜನೆ: ಸಾರಿಗೆ ಸಂಸ್ಥೆಯು ಸಾಮಾಜಿಕ ಹೊಣೆಗಾರಿಕೆಗೆ ಹಾಗೂ ಸರ್ಕಾರದ ಯೋಜನೆಗಳಾದ ವಿದ್ಯಾರ್ಥಿಗಳಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ, ಸ್ವಾತಂತ್ರ್ಯ ಹೋರಾಟಗಾರರ ವಿಧವೆಯರಿಗೆ, ಅಂಗವಿಕಲರಿಗೆ ರಿಯಾಯಿತಿ ದರದಲ್ಲಿ ಪ್ರಯಾಣಿಸಲು ಪಾಸ್ ನೀಡಿದೆ. ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಲಾಗಿದೆ. ಸರ್ಕಾರದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಂಸ್ಥೆ ಸಾಕಷ್ಟು ಹಣ ಖರ್ಚು ಮಾಡುತ್ತಿದೆ.
  ಅಲ್ಲದೆ ಜಿಲ್ಲೆಯಲ್ಲಿ ರಸ್ತೆ ಇರುವ ಎಲ್ಲ ಹಳ್ಳಿಗಳಿಗೂ ಬಸ್ ಸೌಲಭ್ಯ ಕಲ್ಪಿಸುವ ಮೂಲಕ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯವನ್ನು ಕಲ್ಪಿಸಿದೆ. ಇಂಥ ಪರಿಸ್ಥಿತಿಯಲ್ಲಿ ಖಾಸಗಿ ಬಸ್ಗಳ ಕಾರ್ಯಾಚರಣೆಯಿಂದಾಗಿ ಸಂಸ್ಥೆಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ಇದರಿಂದ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೇವೆ ಕಲ್ಪಿಸಲು ತೀವ್ರ ತೊಂದರೆಯಾಗಲಿದೆ. ಇದರಿಂದಾಗಿ ಸಂಸ್ಥೆಯ ನೌಕರರಿಗೆ ವೇತನ ಪಾವತಿಸಲು ಕಷ್ಟವಾಗಲಿದ್ದು, ಸಂಸ್ಥೆಯ ಉದ್ಯೋಗವನ್ನು ನಂಬಿರುವ ಸುಮಾರು 2 ಸಾವಿರ ನೌಕರರು ಮತ್ತು ಅವರ ಕುಟುಂಬಗಳು ಬೀದಿಗೆ ಬರಲಿವೆ.
ವಿರೋಧ: ಆದ್ದರಿಂದ ಸಂಘಟನೆಯು ಖಾಸಗಿ ಬಸ್ಗಳ ಕಾರ್ಯಾಚರಣೆಯನ್ನು ತೀವ್ರವಾಗಿ ವಿರೋಧಿಸುತ್ತದೆ. ಕಾರ್ಮಿಕರ ಹಿತಕಾಪಾಡಲು ಖಾಸಗಿ ಬಸ್ಗಳ ಕಾರ್ಯಾಚರಣೆಗೆ ಕಡಿವಾಣ ಹಾಕಲು ತುರ್ತು ಕ್ರಮ ಜರುಗಿಸಬೇಕೆಂದು ಜಿಲ್ಲಾಡಳಿತಕ್ಕೆ ನೀಡಿದ ಮನವಿಯಲ್ಲಿ ಒತ್ತಾಯಿಸಿದರು.
  ಸಂಘಟನೆಯ ವಿಭಾಗೀಯ ಪ್ರಧಾನ ಕಾರ್ಯದರ್ಶಿ ರತ್ನಪ್ಪ ಪಿ.ಜೈನ್, ಬಸನಗೌಡ ಕರಣಗಿ, ಅಲ್ಲಾ ಪಟೇಲ್, ಸೈದಪ್ಪ ಗುತ್ತೇದಾರ, ಅಲ್ಲಿಸಾಬ ನಾಯ್ಕಲ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement