ಗ್ರಾಮೀಣ ಪ್ರದೇಶದಲ್ಲಿ ಕೊಡ ನೀರಿಗೂ ಪರದಾಟ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 29
ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರು ಕೊಡ ನೀರಿಗಾಗಿ ಪರದಾಡುವುದು ಮುಂದುವರೆದಿದೆ. ಸಕಾಲದಲ್ಲಿ ಮುಂಗಾರು ಪ್ರವೇಶಿಸದಿದ್ದರೆ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿವೆ.
ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಭೀಮಾ ನದಿ ಬತ್ತಿರುವುದರಿಂದ ನದಿ ತೀರದ ಗ್ರಾಮಸ್ಥರು ನೀರಿಗಾಗಿ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಡಿಯುವ ನೀರಿನ ಸಮಸ್ಯೆ ಸದ್ಯ ಉಲ್ಬಣಗೊಂಡಿರುವುದು ಮಹಾರಾಷ್ಟ್ರದ ಗಡಿಯ ಆಳಂದ ತಾಲೂಕಿನ 33 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಈ ತಾಲೂಕಿನ ಸರಸಂಬಾ, ಅಳಂಗಾ, ಖಜೂರಿ, ಕಣಮಸ್, ಹೊದಲೂರ, ತಡಕಲ್, ಕೊಡಲಹಂಗರಗಾ ಸೇರಿದಂತೆ 33 ಗ್ರಾಮಗಳಲ್ಲಿನ ಜನರು ನೀರಿಗಾಗಿ ಪಡೆಯುತ್ತಿರುವ ಸಂಕಷ್ಟ ದೇವರಿಗೆ ಪ್ರೀತಿ ಎಂಬಂತಾಗಿದೆ.
ಕ್ರಿಯಾ ಯೋಜನೆ ಸಲ್ಲಿಕೆ: ಜೇವರ್ಗಿ ತಾಲೂಕಿನ 6, ಗುಲ್ಬರ್ಗ ಮತ್ತು ಚಿಂಚೋಳಿ ತಾಲೂಕಿನ ತಲಾ 3 ಹಾಗೂ ಚಿತ್ತಾಪುರ ತಾಲೂಕಿನ 2 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದೆ.
ಜಿಲ್ಲೆಯ ಬಹುತೇಕ ಡ್ಯಾಂ ಮತ್ತು ನದಿ ಕೊಳ್ಳದಲ್ಲಿ ನೀರಿನ ಮಟ್ಟ ಕುಸಿದಿದೆ. ಒಂದು ವೇಳೆ ಸಕಾಲದಲ್ಲಿ ಮಳೆಯಾಗದಿದ್ದರೆ, ಮುಂದೆ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆ ಎದುರಿಸುವುದಕ್ಕಾಗಿ 8 ಕೋಟಿ ರು. ಮೊತ್ತದ ಕ್ರಿಯಾ ಯೋಜನೆಯೊಂದನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಕಳಿಸಲಾಗಿದೆ ಎಂದು ಜಿಲ್ಲಾಡಳಿತದ ಅಧಿಕೃತ ಮೂಲಗಳು 'ಕನ್ನಡಪ್ರಭ'ಕ್ಕೆ ತಿಳಿಸಿವೆ.
3 ತಿಂಗಳ ಕ್ರಿಯಾ ಯೋಜನೆ ಇದಾಗಿದ್ದು, ಈಗಾಗಲೇ ವಿಸ್ತೃತ ವರದಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ಒಂದು ವೇಳೆ ಸಕಾಲದಲ್ಲಿ ಮಳೆಯಾಗದಿದ್ದರೆ ಈ ಕ್ರಿಯಾ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿವೆ.
ಪರಿಹಾರಕ್ಕೆ ಪ್ರಯತ್ನ: ಬೇಸಿಗೆಯ ಅವಧಿಯಲ್ಲಿ ಜಿಲ್ಲೆಯಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ಎದುರಿಸುವುದಕ್ಕಾಗಿ ರಾಜ್ಯ ಸರ್ಕಾರದಿಂದ ಇದುವರೆಗೂ ಒಂದೇ ಒಂದು ಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಜಿಲ್ಲಾಡಳಿತದಲ್ಲಿ ಲಭ್ಯವಿರುವ 6 ಕೋಟಿ ರು.ಗಳ ಅನುದಾನವನ್ನೇ ಬಳಸಿಕೊಂಡು ಕುಡಿಯುವ ನೀರಿನ ಪರಿಹಾರಕ್ಕೆ ಪ್ರಯತ್ನ ಮಾಡಲಾಗುತ್ತಿದೆ.
ನಾವು ಹಣ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಜಿಲ್ಲಾಡಳಿತದಲ್ಲಿ ಲಭ್ಯವಿರುವ ಅನುದಾನವನ್ನೇ ಬಳಸಿಕೊಳ್ಳುವಂತೆ ಸಲಹೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.