ಚಂದ್ರಂಪಳ್ಳಿ ಸಾಕ್ಷ್ಯಚಿತ್ರಕ್ಕೆ ಜಾಧವ ಚಾಲನೆ
ಚಿಂಚೋಳಿ: ತಾಲೂಕಿನ ಚಂದ್ರಂಪಳ್ಳಿ ಜಲಾಶಯದ ಮೇಲ್ಭಾಗದಲ್ಲಿರುವ ರೈತರ ತರಬೇತಿ ಕೇಂದ್ರವನ್ನು ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲ್ ತರಬೇತಿ ಕೇಂದ್ರವನ್ನಾಗಿ ಪರಿವರ್ತಿಸಲಾಗುವುದು ಎಂದು ಶಾಸಕ ಡಾ. ಉಮೇಶ ಜಾಧವ ಹೇಳಿದರು.
ಚಂದ್ರಂಪಳ್ಳಿ ನೀರಾವರಿ ಯೋಜನಾ ಪ್ರದೇಶದಲ್ಲಿ ಸಾಕ್ಷ್ಯಚಿತ್ರಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲ ಅವರ ನೆಚ್ಚಿನ ತಾಣವಾಗಿದೆ. ಬೆಟ್ಟದ ಮೇಲೆ 1998-99ನೇ ಸಾಲಿನಲ್ಲಿ 25 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ರೈತರ ತರಬೇತಿ ಕೇಂದ್ರ ಸಂಪೂರ್ಣ ನಿರ್ಲಕ್ಷ್ಯತನಕ್ಕೆ ಒಳಗಾಗಿದ್ದು, ಕುರಿಗಳ ಆಶ್ರಯ ತಾಣವಾಗಿದೆ ಎಂದರು.
ಮೈಸೂರಿನ ನಜೀರಸಾಬ್ ತರಬೇತಿ ಕೇಂದ್ರದ ಮಾದರಿಯಲ್ಲಿಯೇ ತರಬೇತಿ ಕೇಂದ್ರವನ್ನಾಗಿ ಮಾಡಿದರೆ ಕೆಡಿಪಿ ಸಭೆ, ತಾಲೂಕಿನ ಮತ್ತು ಜಿಲ್ಲೆಯ ಹಾಗೂ ಸಂಘ, ಸಂಸ್ಥೆ ಮತ್ತು ಜನಪ್ರತಿನಿಧಿಗಳಿಗೆ ಶಿಕ್ಷಕರ ತರಬೇತಿ, ಜಿಲ್ಲಾ ಮಟ್ಟದ ಅಧಿಕಾರಿಗಳು ತರಬೇತಿ ನೀಡಲು ಒಳ್ಳೆಯ ವಾತಾವರಣವಿದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಸಂಪೂರ್ಣವಾಗಿ ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಲಾಗುತ್ತಿದೆ ಎಂದರು.
ಆಂಧ್ರ ಮತ್ತು ಕರ್ನಾಟಕ ಗಡಿಭಾಗಕ್ಕೆ ಹೊಂದಿಕೊಂಡ ಚಂದ್ರಂಪಳ್ಳಿ ಪ್ರವಾಸಿ ತಾಣವನ್ನಾಗಿಸಲು ಮತ್ತು ರೈತರ ತರಬೇತಿ ಕೇಂದ್ರವನ್ನು ವೀರೇಂದ್ರ ಪಾಟೀಲ್ ತರಬೇತಿ ಕೇಂದ್ರವನ್ನಾಗಿ ಪರಿವರ್ತಿಸಲು ಕೇಂದ್ರ ಪ್ರವಾಸೋದ್ಯಮ ಮತ್ತು ಜಿಲ್ಲೆಯ ಸಚಿವರಾದ ಬಾಬುರಾವ ಚಿಂಚನಸೂರ, ಡಾ. ಶರಣಪ್ರಕಾಶ ಪಾಟೀಲ್, ಖಮರುಲ್ ಇಸ್ಲಾಂ ಅವರಿಗೆ ಭೇಟಿ ನೀಡಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.