ಜೂ.3ರಿಂದ ನೃತ್ಯವಧಾನ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 29
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಜೂನ್ 3ರಿಂದ 7ರವರೆಗೆ ಐದು ದಿನಗಳ ನೃತ್ಯವಧಾನ ಎಂಬ ವಿಶೇಷ ನೃತ್ಯ ಕಾರ್ಯಾಗಾರವನ್ನು ಉಡುಪಿ ಜಿಲ್ಲೆಯ ಮೂಲ್ಕಿಯ ಪುನರೂರಿನ ವಿಶ್ವನಾಥ ಸ್ವಾಮಿ ದೇವಸ್ತಾನದ ಆವರಣದಲ್ಲಿ ಆಯೋಜಿಸಿದೆ.
ಐದು ದಿನಗಳ ಈ ತರಬೇತಿಯಲ್ಲಿ ಪ್ರತಿದಿನ ಬೆಳಗ್ಗೆ 7 ರಿಂದ ಸಂಜೆ 8ರವರೆಗೆ ಹಿರಿಯ ಗುರುಗಳಿಂದ ನೃತ್ಯ ಪ್ರಕಾರಗಳಾದ ಭರತನಾಟ್ಯ, ಕೂಚಿಪುಡಿ, ಕಥಕ್ ಹಾಗೂ ಅಭಿನಯದ ತರಬೇತಿಯನ್ನು ನೀಡಲಾಗುವುದು. ನೃತ್ಯದ ಜತೆಗೆ ಪ್ರತಿ ನಿತ್ಯ ಯೋಗಾಭ್ಯಾಸ ಹಾಗೂ ನೃತ್ಯ ತರಬೇತಿ ನೀಡಿದ ಗುರುಗಳಿಂದ ನೃತ್ಯ ಪ್ರದರ್ಶನ ಇರುತ್ತದೆ.
ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ಕನಿಷ್ಠ 3 ವರ್ಷ ನೃತ್ಯದಲ್ಲಿ ಶಿಕ್ಷಣವನ್ನು ಪಡೆದಿರಬೇಕು ಹಾಗೂ 15 ವರ್ಷ ಮೇಲ್ಪಟ್ಟವರಿರಬೇಕು. ಕಾರ್ಯಾಗಾರವು ಉಚಿತವಾಗಿದ್ದು ಶಿಬಿರದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಅಕಾಡೆಮಿಯಿಂದ ಮಾಡಲಾಗುವುದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಟಿ.ಜಿ. ನರಸಿಂಹಮೂರ್ತಿ ತಿಳಿಸಿದ್ದಾರೆ.
ಮೇ 30ರೊಳಗಾಗಿ ಅಕಾಡೆಮಿ ದೂ. 080-22215072. ವಿವರಕ್ಕೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ 2ನೇ ಮಹಡಿ ಜೆ.ಸಿ. ರಸ್ತೆ ಬೆಂಗಳೂರು-560002 ಅಥವಾ ದೂ. 080-22215072ಗೆ ಸಂಪರ್ಕಿಸಬಹುದಾಗಿದೆ.
ಜೂ.1ರಂದು ಶರಣ ಸಂಗಮ
ಕನ್ನಡಪ್ರಭ ವಾರ್ತೆ, ಜೇವರ್ಗಿ, ಮೇ 29
ಬಸವಕೇಂದ್ರ ತಾಲೂಕು ಘಟಕದ ವತಿಯಿಂದ ಜೂನ್ 1ರಂದು ಸಂಜೆ 7ಕ್ಕೆ ಪಟ್ಟಣದ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶರಣ ಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಬೀದರ್ನ ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕಾ ಪಾಟೀಲ್ ಅವರು ಬಸವಣ್ಣನಿಂದ ಬದುಕಿತ್ತು ಈ ಲೋಕಎಂಬ ವಿಷಯದ ಬಗ್ಗೆ ಅನುಭವ ನೀಡಲಿದ್ದಾರೆ.
ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ಆಗಮಿಸಲಿದ್ದಾರೆ. ಸನ್ಮಾನಿತರಾಗಿ ನೂತನ ಶಾಸಕ ಡಾ. ಅಜಯಸಿಂಗ್ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಗುಲ್ಬರ್ಗ ಬಸವ ಕೇಂದ್ರದ ಅಧ್ಯಕ್ಷ ಶಿವಶರಣಪ್ಪ ಕಲಬುರ್ಗಿ ವಹಿಸಲಿದ್ದಾರೆ. ಕಾರ್ಯಕ್ರಮದ ದಾಸೋಹಿಗಳಾಗಿ ಈರಣ್ಣ ರಾಚಪ್ಪ ಭೂತಪುರ ಸೇವೆ ಸಲ್ಲಿಸಲಿದ್ದಾರೆ ಎಂದು ತಾಲೂಕು ಬಸವಕೇಂದ್ರದ ಅಧ್ಯಕ್ಷ ಶರಣಬಸವ ಕಲ್ಲಾ ತಿಳಿಸಿದ್ದಾರೆ.