ಮರಾಠಿಯಲ್ಲಿ ಪ್ರಮಾಣ: ಶಾಸಕರ ಪ್ರತಿಕೃತಿ ದಹನ
ಗುಲ್ಬರ್ಗ: ಕರ್ನಾಟಕ ವಿಧಾನಸಭೆಯಲ್ಲಿ ಬೆಳಗಾವಿಯ ಇಬ್ಬರು ಶಾಸಕರು ಮರಾಠಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಕ್ರಮವನ್ನು ಖಂಡಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆ ಮೇ 30ರಂದು ನಗರದ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಬೆಳಗ್ಗೆ 11ಕ್ಕೆ ಶಾಸಕರ ಪ್ರತಿಕೃತಿ ದಹನ ಮಾಡಲಿದೆ. ಕರ್ನಾಟಕ ವಿಧಾನಸಭೆಯಿಂದ ಆಯ್ಕೆಯಾದ ಈ ಶಾಸಕರು ಕರ್ನಾಟಕದ ಜನತೆಗೆ ದ್ರೋಹ ಬಗೆದಿದ್ದಾರೆ. ಆ ಸಮಯದಲ್ಲಿ ಉಪಸ್ಥಿತರಿದ್ದ ಎಲ್ಲ ಪಕ್ಷದ ಶಾಸಕರು, ಸಭಾಪತಿಗಳು, ಮುಖ್ಯಮಂತ್ರಿಗಳು ಇದನ್ನು ಕೇಳಿ ಯಾವುದೇ ರೀತಿಯಲ್ಲಿ ವಿರೋಧ ಪಡಿಸದೇ ಇರುವುದು ನಾಟಿಕೆಗೇಡಿತನ ಎಂದು ರಾಜ್ಯ ಉಪಾಧ್ಯಕ್ಷ ಮಂಜುನಾಥ ಹಾಗರಗಿ ಅಭಿಪ್ರಾಯಪಟ್ಟಿದ್ದಾರೆ. ಬೆಳಗ್ಗೆ 11ಕ್ಕೆ ನಡೆಯುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೇದಿಕೆ ಪದಾಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು ಭಾಗವಹಿಸಬೇಕೆಂದು ಜೈಕರವೇ ಕೋರಿದ್ದಾರೆ.
ಪ್ರತ್ಯೇಕ ಘಟನೆ; 2 ಗುಡಿಸಲು, 6 ಕುರಿ ಬಲಿ
ಗುಲ್ಬರ್ಗ: ಆಳಂದ ತಾಲೂಕಿನ ಹಡಲಗಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ 2 ಗುಡಿಸಲು ಭಸ್ಮವಾದರೆ, ಲಾಡ ಮುಗಳಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ 6 ಕುರಿ, 1 ಆಕಳು ಕರು ಬಲಿಯಾದ ಘಟನೆ ನಡೆದಿವೆ. ಆಳಂದ ತಾಲೂಕಿನ ಹಡಲಗಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿ 2 ಗುಡಿಸಲುಗಳಿಗೆ ಬೆಂಕಿ ಹತ್ತಿದ್ದು, 70 ಸಾವಿರ ಮೌಲ್ಯದ ಆಸ್ತಿ ನಾಶವಾಗಿದೆ. ಗ್ರಾಮದ ಹೊರವಲಯದಲ್ಲಿರುವ ಬಾಬುರಾವ್ ಸರಸಂಬಿ ಮತ್ತು ಮಲ್ಲಿನಾಥ ಒಗ್ಗಾಲಿ ಅವರಿಗೆ ಸೇರಿದ 2 ಗುಡಿಸಲುಗಳು ಭಸ್ಮವಾಗಿವೆ. ಗುಡಿಸಲಲ್ಲಿ ಕಟ್ಟಲಾದ ಎಮ್ಮೆ ಕರು ಸತ್ತಿದ್ದು, ಕಟ್ಟಿಗೆ, ಪತ್ರಾ, ಮೇವು, ಕೃಷಿ ಸಾಮಗ್ರಿಗಳು ಬೆಂಕಿಯಲ್ಲಿ ಬೆಂದಿವೆ. ಕಂದಾಯ ನಿರೀಕ್ಷಕ ಸಿದ್ದಮಲ್ಲಪ್ಪ ಅಷ್ಠಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾಡ ಮುಗಳಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಗುಡುಸಲಿಗೆ ತಗುಲಿ 6 ಕುರಿ, 1 ಆಕಳು ಕರುಗಳು ಸಜೀವ ದಹನವಾಗಿವೆ. ಶರಣಪ್ಪ ಮಾವುರಕರ್ ಎಂಬವರಿಗೆ ಸೇರಿದ ಗುಡಿಸಲಾಗಿದ್ದು, ಬೆಂಕಿಯಿಂದ 20 ಪತ್ರಾಗಳು, ಎತ್ತಿನ ಗಾಡಿ, ಕೃಷಿ ಉಪಕರಣಗಳು ದಿನ ಬಳಕೆ ಸಾಮಾನುಗಳು ಸೇರಿದಂತೆ 50 ಸಾವಿರ ಮೌಲ್ಯದ ವಸ್ತುಗಳು ಹಾನಿಗೊಳಗಾಗಿವೆ. ಸ್ಥಳಕ್ಕೆ ಕಂದಾಯ ನಿರೀಕ್ಷಕ ಸೂರ್ಯಕಾಂತ ಭೇಟಿ ನೀಡಿ ಪರಿಶೀಸಿದರು. ಈ ಕುರಿತು ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ರಸ್ತೆ ಸುರಕ್ಷತಾ ಸಭೆ
ಗುಲ್ಬರ್ಗ: ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿಯ ಸಭೆಯು ಮೇ 30ರಂದು ಮಧ್ಯಾಹ್ನ 3.30ಕ್ಕೆ ಗುಲ್ಬರ್ಗ ಜಿಲ್ಲಾಧಿಕಾರಿ ಸಭಾಭವನದಲ್ಲಿ ನಡೆಯಲಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.