ಯೋಜನೆ ಯಶಸ್ವಿಗೆ ಧನಾತ್ಮಕ ಚಿಂತನೆ ಅಗತ್ಯ
ಕನ್ನಡಪ್ರಭ ವಾರ್ತೆ ಶಹಾಪುರ ಮೇ 29
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರದ ಯೋಜನೆಗಳು ಕಟ್ಟುನಿಟ್ಟಾಗಿ ಜಾರಿಯಾಗಲು ಸಾಮೂಹಿಕ ಪ್ರಯತ್ನ ಅಗತ್ಯವಾಗಿದ್ದು ವಿಶೇಷವಾಗಿ ಶಿಕ್ಷಕ ಸಮುದಾಯ ಧನಾತ್ಮಕವಾಗಿ ಚಿಂತನೆ ಮಾಡಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಾಂಜನೇಯ ತಿಳಿಸಿದರು.
ಭೀಮರಾಯನಗುಡಿ ವಸಹಾತುವಿನ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ವಾರ್ಷಿಕ ಯೋಜನೆಗಳ ಅನುಷ್ಠಾನದ ಪೂರ್ವ ಸಿದ್ಧತಾ ಅವಲೋಕನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಥಮಿಕ, ಪ್ರೌಢಶಿಕ್ಷಣಕ್ಕೆ ವಿಶೇಷ ಕಾಳಜಿ: ಶೈಕ್ಷಣಿಕ ಪ್ರಗತಿ ಸಾಧಿಸುವತ್ತ ಕಾಳಜಿ ಅಗತ್ಯವಾಗಿದ್ದು, ಜಿಲ್ಲಾ ಹಂತದ ಅನುಷ್ಠಾನ ಅಧಿಕಾರಿಯಿಂದ ಹಿಡಿದು ಕ್ಲಸ್ಟರ್ ಹಂತದ ಅಧಿಕಾರಿಗಳವರೆಗೆ ಗುರುತರ ಜವಾಬ್ದಾರಿಯಿದೆ. ಅನುಶಾಸನ ಪಾಲನೆ ಕಡ್ಡಾಯವಾಗಿರಬೇಕು. ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸಾಧ್ಯವಿಲ್ಲ. ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷಣಕ್ಕೆ ವಿಶೇಷ ಕಾಳಜಿ ವಹಿಸಬೇಕು ಎಂದರು.
ಶಾಲಾ ಪ್ರಾರಂಭ ಹಬ್ಬದ ರೀತಿಯಲ್ಲಿರಲಿ: ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ರಾಯಪ್ಪರಡ್ಡಿ, ಶೈಕ್ಷಣಿಕ ವರ್ಷದ ಪೂರ್ವ ಸಿದ್ಧತೆ ಹಾಗೂ ಶಾಲಾ ಪ್ರಾರಂಭೋತ್ಸವದ ಬಗ್ಗೆ ಮಾತನಾಡಿ, ಮೇ 31ರಂದು ಪ್ರತಿಯೊಂದು ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಬೇಕು. ಅಂದೇ ಎಸ್ಡಿಎಂಸಿ ಸದಸ್ಯರು, ಶಿಕ್ಷಣ ಪ್ರೇಮಿಗಳ ಸಭೆ ನಡೆಸಿ ಶಾಲಾ ವಾರ್ಷಿಕ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ಶಾಲೆ ಪ್ರಾರಂಭವಾದ ಬಗ್ಗೆ ಅರಿವು ಮೂಡಿಸಲು ಪ್ರಭಾತ ಫೇರಿ ನಡೆಸಿ ಜೂ. 1ರಿಂದಲೇ ಶೈಕ್ಷಣಿಕ ವರ್ಷದ ತರಗತಿಯ ಬೋಧನೆಗಳು ಪ್ರಾರಂಭವಾಗಬೇಕು. 5 ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳನ್ನು ಕಡ್ಡಾಯವಾಗಿ ಶಾಲಾ ದಾಖಲಾತಿ ಮಾಡಿಸಿಕೊಳ್ಳುವತ್ತ ಶಿಕ್ಷಕ ಸಮುದಾಯ ಕ್ರಿಯಾಶೀಲವಾಗಬೇಕು ಎಂದರು.
ಸುರಪುರ ಬಿಇಒ ಕೆಂಪರಂಗಯ್ಯ ಮಾತನಾಡಿ, ಪ್ರತಿ ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸಾಮರ್ಥ್ಯಗಳ ಪುನರ್ಬಲನ ಮಾಡಲು ಸೇತುಬಂಧ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತಿಳಿಸಿದರು.
ನಲಿಕಲಿ ಅನುಷ್ಠಾನಕ್ಕೆ ಮಹತ್ವ ನೀಡಿ: ಯಾದಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಮಜರ್ ಹುಸೇನ್ ಮಾತನಾಡಿ, ನಲಿ- ಕಲಿ ಬೋಧನಾ ಪದ್ಧತಿಯ ಅನುಷ್ಠಾನಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಶುದ್ಧ ಬರಹದತ್ತ ಗಮನ, ಮಕ್ಕಳ ಹಾಜರಾತಿಯನ್ನು ಹೆಚ್ಚಿಸುವತ್ತ ಗಮನ ನೀಡಬೇಕು ಎಂದರು.
ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಶಾಂತಗೌಡ ಬಿರಾದಾರ, ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಡಿ.ಎಂ. ದೊಡ್ಮನಿ ಮಾತನಾಡಿದರು. ಸಿಆರ್ಪಿ ಶರಣಪ್ಪ ನಾಶಿ ಪ್ರಾರ್ಥಿಸಿದರು, ಶಿಕ್ಷಣ ಸಂಯೋಜಕ ರಾಮಭಟ್ ಜೋಶಿ, ಸಿದ್ದಪ್ಪ ನಿರೂಪಿಸಿದರು, ಶಶಿಧರ ಬಿರಾದಾರ ಸ್ವಾಗತಿಸಿದರು. ಮಹಾದೇವಪ್ಪ ವಂದಿಸಿದರು.