ವಿ. ತಹಸೀಲ್ದಾರ್ ಕಚೇರಿ ಸ್ಥಳಾಂತರಕ್ಕೆ ಮೀನಮೇಷ ಯಾಕೆ?
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 29
ಗುಲ್ಬರ್ಗ ಉತ್ತರ ವಲಯ ವಿಶೇಷ ತಹಸೀಲ್ದಾರ್ ಕಚೇರಿಯನ್ನು ಕಮಲಾಪುರಕ್ಕೆ ಸ್ಥಳಾಂತರಿಸುವಲ್ಲಿ ಆಗುತ್ತಿರುವ ವಿನಾಕಾರಣ ವಿಳಂಬವನ್ನು ತೀವ್ರವಾಗಿ ಆಕ್ಷೇಪಿಸಿರುವ ಕಮಲಾಪುರ ಹಾಗೂ ಸುತ್ತಲಿನ ಹತ್ತಾರು ಗ್ರಾಮಗಳ ಜನತೆ ಸರ್ಕಾರ ತಕ್ಷಣ ತಾನು ನುಡಿದಂತೆ ಈ ವಿಚಾರದಲ್ಲಿ ನಡೆಯಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತಂತೆ ಪ್ರಕಟಣೆ ನೀಡಿರುವ ಕಮಲಾಪುರ ತಾಲೂಕು ನಿರ್ಮಾಣ ಹೋರಾಟ ಸಮಿತಿ ಕಾರ್ಯದರ್ಶಿ ರಾಜಶೇಖರ ಡೊಂಗರಗಾಂವ್ ವಿಶೇಷ ತಹಸೀಲ್ ಕಚೇರಿ ಸ್ಥಳಾಂತರದ ಬಗ್ಗೆ ಸರ್ಕಾರದಿಂದಲೇ 2012ರ ಡಿಸೆಂಬರ್ 17ರಂದೇ ಆದೇಶ ಹೊರಬಿದ್ದಿತ್ತು. ವರ್ಷ ಕಳೆದರೂ ಇಂದಿಗೂ ವಿಶೇಷ ತಹಸೀಲ್ ಕಚೇರಿ ಕಮಲಾಪುರಕ್ಕೆ ಸ್ಥಳಾಂತರಗೊಂಡಿಲ್ಲ. ಇದರಿಂದಾಗಿ ಈ ಭಾಗದ ಸಾರ್ವಜನಿಕರಿಗೆ ತುಂಬ ತೊಂದರೆಯಾಗುತ್ತಿದೆ ಎಂದಿದ್ದಾರೆ.
ಗುಲ್ಬರ್ಗದಲ್ಲಿರುವ ಉತ್ತರ ವಲಯ ತಹಸೀಲ್ ಕಚೇರಿಯನ್ನು ಅಲ್ಲಿನ ಸಿಬ್ಬಂದಿ ಸಮೇತ ಕಮಲಾಪುರಕ್ಕೆ ಸ್ಥಳಾಂತರ ಮಾಡುವ ಆದೇಶ ಸರ್ಕಾರವೇ ಹೊರಡಿಸಿದ್ದರೂ, ಇಂದಿಗೂ ಅದು ಜಾರಿಗೆ ಬಂದಿಲ್ಲ ಯಾಕೆ ಎಂಬುದೇ ಗೊತ್ತಾಗುತ್ತಿಲ್ಲ. ವಿಶೇಷ ತಹಸೀಲ್ದಾರ್ ಕಚೇರಿ ಕಮಲಾಪುರಕ್ಕೆ ಬಂದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಡೊಂಗರಗಾಂವ್ ಹೇಳಿದ್ದಾರೆ.
ಈ ಕುರಿತಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ರಾಜಶೇಖರ ತಕ್ಷಣ ಉತ್ತರ ವಲಯ ಕಚೇರಿಯನ್ನು ಕಮಲಾಪುರಕ್ಕೆ ಸ್ಥಳಾಂತರಿಸುವ ವಿಚಾರದಲ್ಲಿ ಸರ್ಕಾರದ ಆದೇಶದಂತೆ ಅಗತ್ಯ ಹಾಗೂ ಶೀಘ್ರ ಕ್ರಮಗಳನ್ನು ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ಉತ್ತರ ವಲಯ ತಹಸೀಲ್ ಕಚೇರಿ ಕಮಲಾಪುರಕ್ಕೆ ಸ್ಥಳಾಂತರಗೊಂಡಲ್ಲಿ ಇದರಿಂದ ವಿದ್ಯಾರ್ಥಿಗಳು, ರೈತರು, ಮಹಿಳೆಯರು, ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಕಮಲಾಪುರ ಹೊಸ ತಾಲೂಕು ರಚನೆ ಆದೇಶ ರದ್ದತಿಗೆ ವಿರೋಧ:
ಕಮಲಾಪುರ ಸೇರಿದಂತೆ ರಾಜ್ಯದಲ್ಲಿ ಹೊಸ ತಾಲೂಕುಗಳ ರಚನೆ ಕುರಿತಂತೆ ಈಗಾಗಲೇ ಕಳೆದ ಆರು ತಿಂಗಳ ಹಿಂದೆಯೇ ರಾಜ್ಯ ಸರ್ಕಾರದಿಂದ ಆದೇಶ ಹೊರಬಿದ್ದಿದ್ದು, ಆ ಆದೇಶವನ್ನು ರದ್ದುಪಡಿಸುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮವು ಜನವಿರೋಧಿ ನೀತಿಯಾಗಿದೆ ಎಂದು ಕಮಲಾಪುರ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸುಭಾಸ ಬಿರಾದಾರ ಕಮಲಾಪುರ ದೂರಿದ್ದಾರೆ.
ಹೇಳಿಕೆಯಲ್ಲಿ ಮಾಡಿರುವ ಅವರು, ಹಿಂದಿನ ಸರ್ಕಾರವು ತಾಲೂಕು ಪುನರಾವಿಂಗಡನೆ ಕುರಿತಂತೆ ವಾಸುದೇವರಾವ, ಗದ್ದಿಗೌಡರ ಹಾಗೂ ಎಂ.ಬಿ. ಪ್ರಕಾಶ ಸಮಿತಿಯ ವರದಿಗಳನ್ನು ಆಧರಿಸಿ ಆಡಳಿತ ವಿಕೇಂದ್ರೀಕರಣ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಹೊಸ ತಾಲೂಕುಗಳ ರಚನೆಗೆ ಆದೇಶ ಹೊರಡಿಸಿತ್ತು. ಈ ಹೊಸ ತಾಲೂಕುಗಳ ರಚನೆ ಪ್ರಕ್ರಿಯೆಯು ಸಹ ಆರಂಭವಾಗಿದ್ದು, ಇಂತಹ ಹಂತದಲ್ಲಿ ಹೊಸ ತಾಲೂಕುಗಳ ರಚನೆ ಕೈಬಿಡುವ ಕ್ರಮವು ರಾಜಕೀಯ ದುರುದ್ದೇಶದಿಂದ ಕೂಡಿದ್ದಾಗಿದೆ ಎಂದು ಟೀಕಿಸಿದ್ದಾರೆ.
ಕಮಲಾಪುರ ತಾಲೂಕು ಕೇಂದ್ರವಾಗಲಿ:
ಕಮಲಾಪುರ ತಾಲೂಕು ಕೇಂದ್ರದ ಕಚೇರಿಯು ಸುಸಜ್ಜಿತಗೊಂಡಿದ್ದು, ಈಗ ಆರಂಭಗೊಳ್ಳವುದೊಂದೇ ಬಾಕಿ ಇದೆ. ಆದ್ದರಿಂದ ಜಿಲ್ಲಾಧಿಕಾರಿ ಕೂಡಲೇ ಈಗಾಗಲೇ ಹೊಸ ತಾಲೂಕು ಆರಂಭಕ್ಕೆ ಹೊರಡಿಸಲಾದ ಆದೇಶವನ್ನು ತ್ವರಿತಗತಿಯಲ್ಲಿ ಜಾರಿಗೆ ತರಬೇಕೆಂದು ಅವರು ಆಗ್ರಹಿಸಿದ್ದಾರೆ.
ಕಮಲಾಪುರ ತಾಲೂಕು ರಚನೆಯಿಂದ ಸುಮಾರು 18ಕ್ಕಿಂತ ಹೆಚ್ಚು ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ. ಅವರೆಲ್ಲರೂ ದೂರದ ಗುಲ್ಬರ್ಗಕ್ಕೆ ಬಂದು ಹೋಗುವುದು ಅವರಿಗೆ ಹಣ ಹಾಗೂ ಸಮಯ ಹೆಚ್ಚಿಗೆ ಹೋಗುತ್ತದೆ.
ಸಮೀಪದ ಕಮಲಾಪುರ ಹೊಸ ತಾಲೂಕನ್ನು ಸುತ್ತಮುತ್ತಲಿನ ಗ್ರಾಮಸ್ಥರ ಅನುಕೂಲತೆಯನ್ನು ಗಮನಿಸಿ ಭೌಗೋಳಿಕವಾಗಿ ತಾಲೂಕು ರಚನೆ ಮಾಡಲಾಗಿದೆ. ಆದ್ದರಿಂದ ಕೂಡಲೇ ಕಮಲಾಪುರ ಹೊಸ ತಾಲೂಕು ಕೇಂದ್ರವಾಗಿ ಕಾರ್ಯನಿರ್ವಸಬೇಕೆಂದು ಅವರು ಒತ್ತಾಯಿಸಿದ್ದಾರೆ.